
ಬೆಂಗಳೂರು: ಕಾಂಗ್ರೆಸ್ ಒಳಜಗಳಕ್ಕೆ ಮದ್ದರೆಯಲು ರಾಜ್ಯ ಉಸ್ತುವಾರಿ ಸುರ್ಜೇವಾಲ ಕೊಟ್ಟ ವಾರ್ನಿಂಗ್ ಕೆಲಸ ಮಾಡಿಲ್ಲ. ಆದರೆ ಹೊಸ ಸ್ವರೂಪ ಪಡೆದಿದೆ. ಸಿಎಂ ಆಪ್ತ ಸಚಿವ ಸತೀಶ್ ಜಾರಕಿಹೊಳಿ ಬಹಿರಂಗವಾಗಿಯೇ ಹೇಳಿಕೆ ನೀಡಿದ ಬೆನ್ನಲ್ಲೇ ಈಗ ಗೃಹ ಸಚಿವ ಪರಮೇಶ್ವರ್ ಒಂದು ಹುದ್ದೆ ಪರ ಧ್ವನಿಗೂಡಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಇಂದು ಮಾಧ್ಯಮಗಳಿಗೆ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ ಅವರು, ಡಿಕೆ ಶಿವಕುಮಾರ್ ಅವರ ಬಳಿ ಎರಡು ದೊಡ್ಡ ಖಾತೆಯಿದೆ. ಅವರಿಗೆ ಪಕ್ಷ ಸಂಘಟನೆಯ ಒತ್ತಡವೂ ಇದೆ. ನಾನು ಹಿಂದೆ ಅಧ್ಯಕ್ಷಗಿರಿಗಾಗಿ ಸಚಿವ ಸ್ಥಾನ ಬಿಟ್ಟುಕೊಟ್ಟಿದ್ದೆ ಎಂದು ಹೇಳುವ ಮೂಲಕ ಒಂದು ಒಂದು ಹುದ್ದೆಯ ಪರ ಬ್ಯಾಟ್ ಬೀಸಿದ್ದಾರೆ.
ಅಂದು ನನಗೆ ಮಂತ್ರಿ ಅಥವಾ ಅಧ್ಯಕ್ಷಗಿರಿ ಪೈಕಿ ಒಂದು ಆಯ್ಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದರು. ನಾನು ಅಧ್ಯಕ್ಷ ಸ್ಥಾನವನ್ನು ಆಯ್ಕೆ ಮಾಡಿದ್ದೆ. ಶಿವಕುಮಾರ್ ಈಗ ಡಿಸಿಎಂ ಮತ್ತು ಅಧ್ಯಕ್ಷರಾಗಿದ್ದಾರೆ. ಪಕ್ಷ ಸಂಘಟಿಸುವ ದೊಡ್ಡ ಜವಾಬ್ದಾರಿ ಸಹ ಇದೆ. ಹೈಕಮಾಂಡ್‌ನವರು ಏನು ತೀರ್ಮಾನ ಮಾಡ್ತಾರೋ ನೋಡಬೇಕು ಎಂದು ಹೇಳಿದರು.
ಹೈಕಮಾಂಡ್ ಗೆ ವರದಿ ಕೊಡೋದನ್ನು ಯಾರು ಬೇಡ ಅಂತಾರೆ. ವರದಿ ಕೊಡಲು ಇವರಿದ್ದಾರೆ, ಪಡೆಯಲು ಅವರಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಮಾಧ್ಯಮ ಪ್ರಕಟಣೆ ವಿಚಾರವಾಗಿ ಜಿ.ಪರಮೇಶ್ವರ್ ಸೂಚ್ಯವಾಗಿ ಉತ್ತರಿಸಿದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಯಾವಾಗ ಅಂತ ಗೊತ್ತಿಲ್ಲ. ಲೋಕಸಭೆ ನಂತರ ಬದಲಾವಣೆ ಆಗುತ್ತೆ ಅಂತ ಸತೀಶ್ ಜಾರಕಿಹೊಳಿ ಹೇಳಿದ್ದು ನಾನು ನೋಡಿದೆ. ಅದರ ಬಗ್ಗೆ ನನಗೇನೂ ಗೊತ್ತಿಲ್ಲ. ಡಿಕೆಶಿ ಪಕ್ಷ ಸಂಘಟನೆ ಸರಿಯಾಗಿ ಮಾಡ್ತಿಲ್ಲ ಎಂಬ ಆರೋಪ ವಿಚಾರವಾಗಿ ಮಾತನಾಡಿ, ಹೈಕಮಾಂಡ್‌ನವರು ಅದನ್ನೆಲ್ಲ ಗಮನಿಸ್ತಿದ್ದಾರಲ್ಲ.
ನಾವು ಒಂದು ಸಮುದಾಯ ಸೇರಿ ಸಭೆ ಮಾಡ್ತೀವಿ ಅಂದಿದ್ದನ್ನು ಹೈಕಮಾಂಡ್ ಗಮನಿಸಿದೆ. ಹಾಗೆಯೇ ಪಕ್ಷ ಸಂಘಟನೆ ಆಗ್ತಿದೆಯಾ ಇಲ್ವಾ ಅಂತನೂ ಹೈಕಮಾಂಡ್‌ನವರು ಗಮನಿಸಿರುತ್ತಾರೆ. ಆ ಸಂದರ್ಭದಲ್ಲಿ ಅವರು ತೀರ್ಮಾನ ತಗೋತಾರೆ ಎಂದರು.
ಜಾತಿ ಜನಗಣತಿ ವರದಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಈ ಬಗ್ಗೆ ಸಿಎಂ ಈಗಾಗಲೇ ಹೇಳಿದ್ದಾರೆ. ಯಾವ ಕಾರಣಕ್ಕೆ ಅದರ ಚರ್ಚೆ ಇವತ್ತಾಗ್ತಿಲ್ಲ ಅಂತ ಗೊತ್ತಿಲ್ಲ. ಸಂಪುಟ ಸಭೆಗೆ ಹೋದಾಗ ಯಾಕೆ, ಏನು ಅಂತ ಗೊತ್ತಾಗುತ್ತೆ. ಒಕ್ಕಲಿಗರು, ಲಿಂಗಾಯತರನ್ನು ಡಿಗ್ರೇಡ್ ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ. ವರದಿ ಈಗಾಗಲೇ ಸರ್ಕಾರಕ್ಕೆ ಸಲ್ಲಿಕೆ ಆಗಿದೆ. ವರದಿ ಜಾರಿಯಾಗದಂತೆ ಯಾರ ಒತ್ತಡವೂ ಇಲ್ಲ ಎಂದರು.
Advertisement