
ಬೆಂಗಳೂರು: ಬಿಜೆಪಿಯಲ್ಲಿನ ಒಳಜಗಳಗಳು ಸ್ಪಷ್ಟವಾಗುತ್ತಿದ್ದು, ಪಕ್ಷದ ನಾಯಕರು ಪರಸ್ಪರ ಟೀಕಿಸಿಕೊಳ್ಳುವ ಮೂಲಕ ಕೆಸರೆರೆಚಾಟ ಆರಂಭಿಸಿದ್ದಾರೆ. ಹಿರಿಯ ನಾಯಕರು ಮಂಗಳವಾರ ಬೆಂಗಳೂರಿನಲ್ಲಿ ಪಕ್ಷದ ಆಂತರಿಕ ವಿಷಯಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲು ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ.
ಬಿಜೆಪಿ ನಾಯಕರು ಚುನಾಯಿತ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಿದ್ದಾರೆ, ನಂತರ ರಾಜ್ಯ ಅಧ್ಯಕ್ಷರ ಆಯ್ಕೆಯ ಕುರಿತು ಚರ್ಚಿಸಲು ಸಾಂಸ್ಥಿಕ ಸಭೆ ಮತ್ತು ನಂತರ ಸಂಜೆ ಕೋರ್ ಕಮಿಟಿ ಸಭೆ ನಡೆಯಲಿದೆ. ಇದರಲ್ಲಿ ಗೋಹತ್ಯೆ, ಕಾಂಗ್ರೆಸ್ ಸರ್ಕಾರಕ್ಕೆ ಸಂಬಂಧಿಸಿದ ಹಗರಣಗಳು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣ ಇತ್ಯಾದಿಗಳ ಬಗ್ಗೆ ಚರ್ಚಿಸುವ ನಿರೀಕ್ಷೆಯಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ ದಾಸ್ ಅಗರ್ವಾಲ್, ಪೊನ್ ರಾಧಾಕೃಷ್ಣನ್ ಮತ್ತು ಸಹ-ಪ್ರಭಾರಿ ಸುಧಾಕರ್ ರೆಡ್ಡಿ ಬೆಂಗಳೂರಿಗೆ ಬರುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೋಮವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಮಧ್ಯಾಹ್ನ 3 ಗಂಟೆಗೆ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ, ಶಾಸಕರು, ಸಂಸದರು ಮತ್ತು ಎಂಎಲ್‌ಸಿಗಳು ಸೇರಿದಂತೆ ಚುನಾಯಿತ ಪ್ರತಿನಿಧಿಗಳು ಪಕ್ಷದ ನಾಯಕರನ್ನು ಭೇಟಿಯಾಗಲಿದ್ದಾರೆ.
ಈ ಸಭೆಯಲ್ಲಿ, ಹಲವು ವಿಷಯಗಳ ಬಗ್ಗೆ ಚರ್ಚಿಸಲಾಗುವುದು ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಅಭಿಪ್ರಾಯ ಸಂಗ್ರಹಿಸಲಾಗುವುದು. ನಂತರ, ಸಂಘಟನೆಗೆ ಸಂಬಂಧಿಸಿದ ಸಭೆ ನಡೆಯಲಿದೆ. ಮಂಡಲ ಅಧ್ಯಕ್ಷರ ಚುನಾವಣೆ ಈಗಾಗಲೇ ನಡೆದಿದೆ. ಜಿಲ್ಲಾ ಘಟಕದ ಅಧ್ಯಕ್ಷರ ನಿಯೋಜನೆ ಪ್ರಕ್ರಿಯೆ ನಡೆಯುತ್ತಿದೆ. ಪಕ್ಷದ ಚುನಾವಣಾ ಅಧಿಕಾರಿಗಳು, ಸಹ ಅಧಿಕಾರಿಗಳು, 13 ಜನ ಮೇಲ್ವಿಚಾರಕರ ಸಭೆ ಕೂಡ ನಡೆಯಲಿದೆ. ರಾಜ್ಯ ಘಟಕದ ಅಧ್ಯಕ್ಷರ ಚುನಾವಣೆ ಬಗ್ಗೆಯೂ ಚರ್ಚೆಯಾಗಲಿದೆ ಎಂದು ಅವರು ತಿಳಿಸಿದರು.
ಹೊನ್ನಾವರದಲ್ಲಿ ನಡೆದ ಹಸುವಿನ ಹತ್ಯೆಯ ಕುರಿತು ಮಾತನಾಡಿದ ವಿಜಯೇಂದ್ರ, ಇದನ್ನು ಅಮಾನವೀಯ ಕೃತ್ಯ ಎಂದು ಕರೆದರು. ವಿಜಯಪುರದಲ್ಲಿ, ಕಾರ್ಮಿಕರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಯಿತು. "ಪ್ರತಿದಿನ ಅನೇಕ ಅಪರಾಧಗಳು ವರದಿಯಾಗುತ್ತಿವೆ. ಜನರು ಪೊಲೀಸರ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಇದು ತುಂಬಾ ನಾಚಿಕೆಗೇಡಿನ ಕೃತ್ಯ. ಇಂತಹ ಕೃತ್ಯಗಳು ನಡೆದಾಗ, ಸಿದ್ದರಾಮಯ್ಯ ಸರ್ಕಾರ ಮೃದು ಧೋರಣೆ ತಳೆಯುತ್ತದೆ ಎಂದು ಆರೋಪಿಸಿದರು.
ದೇಶವಿರೋಧಿ ಮತ್ತು ಹಿಂದೂ ವಿರೋಧಿಗಳಿಗೆ ಸರ್ಕಾರದಿಂದ ಯಾವುದೇ ಭಯವಿಲ್ಲ. ಸರ್ಕಾರ ಎಚ್ಚರಗೊಳ್ಳಬೇಕು ಎಂದು ಅವರು ಹೇಳಿದರು. ಕಳೆದ ಒಂದು ವರ್ಷದಲ್ಲಿ, ಇಂತಹ ಅನೇಕ ಘಟನೆಗಳು ನಡೆದಿವೆ, ಆದರೆ ಸರ್ಕಾರ ಇವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಕಾಂಗ್ರೆಸ್ ಶಾಸಕರು ಸಹ ತಮ್ಮ ಕ್ಷೇತ್ರಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗದ ಕಾರಣ ಅವರು ಅತೃಪ್ತರಾಗಿದ್ದಾರೆ ಎಂದು ವಿಜಯೇಂದ್ರ ಆರೋಪಿಸಿದರು.
Advertisement