
ಮೈಸೂರು: ಹೆಚ್‌ಡಿ ಕುಮಾರಸ್ವಾಮಿ ಅವರು ಶಾಸಕರ ಅಭಿಪ್ರಾಯಗಳನ್ನು ಸಂಗ್ರಹಿಸಿದರೂ ಅದಕ್ಕೆ ಬೆಲೆ ಕೊಡುವುದಿಲ್ಲ. ತಮಗನ್ನಿಸಿದ್ದನ್ನೇ ಮಾಡುತ್ತಾರೆಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಹಾಗೂ ಶಾಸಕ ಜಿ.ಟಿ.ದೇವೇಗೌಡ ಅವರು ಬುಧವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ನೂತನ ರಾಜ್ಯಾಧ್ಯಕ್ಷರ ಆಯ್ಕೆ ಕುರಿತು ಕುಮಾರಸ್ವಾಮಿಯವರು 19 ಶಾಸಕರ ಅಭಿಪ್ರಾಯವನ್ನು ಕೇಳಿದ್ದಾರೆ, ಆದರೆ, ಶಾಸಕರ ಅಭಿಪ್ರಾಯಗಳಿಗ ಗೌರವ ನೀಡದೆ, ಅಂತಿಮವಾಗಿ ಅವರೇ ನಿರ್ಧಾರ ಕೈಗೊಳ್ಳುತ್ತಾರೆಂದು ಹೇಳಿದರು.
ನೂತನ ರಾಜ್ಯಾಧ್ಯಕ್ಷರ ನೇಮಕದ ಬೆಳವಣಿಗೆಗಳ ಬಗ್ಗೆ ನನಗೆ ತಿಳಿದಿಲ್ಲ, ಆದರೆ ಯುವ ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ ಅವರಿಗ ಸ್ಥಾನ ಸಿಗಲಿ ಎಂದು ಆಶಿಸುತ್ತೇನೆಂದು ತಿಳಿಸಿದರು.
ಜವಾಬ್ದಾರಿ ಹೊರಲು ನೀವು ಸಿದ್ಧರಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿ, 19 ಜೆಡಿಎಸ್ ಶಾಸಕರನ್ನು ಕರೆದುಕೊಂಡು ಹೋಗಲು ಸಾಧ್ಯವಾಗದೇ ಇರುವಾಗ ಪಕ್ಷ ಸಂಘಟನೆಯ ನೇತೃತ್ವ ವಹಿಸುವುದು ಹೇಗೆ? ಎಂದು ವ್ಯಂಗ್ಯವಾಡಿದರು.
ಕ್ಷೇತ್ರದ ಅಭಿವೃದ್ಧಿ ಹಾಗೂ ಕುಟುಂಬದ ಕೆಲಸಗಳಲ್ಲಿ ನಿರತರಾಗಿರುವ ಕಾರಣ ಮುಂದಿನ 6 ತಿಂಗಳ ಕಾಲ ಪಕ್ಷ ಸಂಘಟನೆ ಕಾರ್ಯದಿಂದ ದೂರ ಉಳಿಯುವುದಾಗಿ ಪಕ್ಷದ ಮುಖಂಡರಿಗೆ ತಿಳಿಸಿದ್ದೇನೆಂದು ಇದೇ ವೇಳೆ ತಿಳಿಸಿದರು.
ಪಕ್ಷದಿಂದ ಉಚ್ಛಾಟನೆ ವಿಚಾರವಾಗಿ ಮಾತನಾಡಿ, ಬಿಜೆಪಿಯಲ್ಲಿ ಯತ್ನಾಳ್ ವಿರುದ್ಧ ಕ್ರಮ ಕೈಗೊಂಡಿಲ್ಲ. ನನ್ನ ಮೇಲಾಗಲಿ, ಯತ್ನಾಳ್ ಮೇಲಾಗಲಿ ಕ್ರಮ ಕೈಗೊಳ್ಳಲು ಪಕ್ಷದ ನಾಯಕರಿಗೆ ಧಮ್ ಬೇಕು. ನಾಯಕರಿಗೆ ಆ ತಾಕತ್ ಇಲ್ಲ ಎಂದರು.
ಬಳಿಕ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ ಅವರು, ಮುಡಾ ಅಕ್ರಮ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿಗಳು ರಾಜೀನಾಮೆ ನೀಡುವ ಅಗತ್ಯವಿಲ್ಲ, ಇತರ ಪಕ್ಷಗಳ ನಾಯಕರ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ. ಮಾಜಿ ಸಿಎಂ, ಸಿಎಂ ಎಲ್ಲರ ಮೇಲೆ ಎಫ್ಐಆರ್ ಇದೆ. ಎಷ್ಟು ಜನ ರಾಜೀನಾಮೆ ಕೊಟ್ಟಿದ್ದಾರೆ? ಕೋರ್ಟ್ ತೀರ್ಪು ಬರುವವರೆಗೆ ಸಿಎಂ ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ. ತಮ್ಮ ಪಕ್ಷದಲ್ಲಿ ಯಾರ ಮೇಲೆ ಎಷ್ಟು ಎಫ್ಐಆರ್ ಗಳಿವೆ ಎಂಬುದನ್ನು ನಾಯಕರು ಮೊದಲು ನೋಡಿಕೊಂಡು ನಂತರ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳಲಿ ಎಂದು ಹೇಳಿದರು.
ಇದೇ ವೇಳೆ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಯತ್ನಾಳ್ ಬಹಳ ಬುದ್ಧಿ ವಂತರು, ಕೇಂದ್ರ ಸಚಿವರಾಗಿದ್ದರು. ಶಕ್ತಿವಂತರು. ನಾನು ರಾಜಕೀಯ ಪ್ರವೇಶಿಸಿದ ಮೇಲೆ ಎಷ್ಟು ಸಂಪಾದನೆ ಮಾಡಿದ್ದೇನೆ, ಅವರು ಎಷ್ಟು ಮಾಡಿದ್ದಾರೆ ಅಂತ ಹೇಳಲಿ. ಶಾಸಕ ಆಗೋಕೆ ಮುಂಚೆ ಯತ್ನಾಳ್ ಆಸ್ತಿ ಎಷ್ಟಿತ್ತು? ಈಗ ಎಷ್ಟಿದೆ ಎಂದು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ನಾನು ಲಂಚ ಹೊಡೆದಿಲ್ಲ. ಅಕ್ರಮ ಆಸ್ತಿ ಮಾಡಿಲ್ಲ. ನನ್ನ ಮೇಲೆ ಆರೋಪ ಮಾಡಿರುವ ಯತ್ನಾಳ್ ಗೆ ಬಹಿರಂಗ ಸವಾಲು ಹಾಕುತ್ತೇನೆ. ನಾನು ಭ್ರಷ್ಟಾಚಾರ ಮಾಡಿರುವುದನ್ನು ಯತ್ನಾಳ್ ಸಾಬೀತುಪಡಿಸಿದರೆ ರಾಜೀನಾಮೆ ನೀಡುತ್ತೇನೆ. ಬೇರೆಯವರ ಬಗ್ಗೆ ಮಾತನಾಡಿದಂತೆ ನನ್ನ ಜೊತೆ ಮಾತನಾಡುವುದು ಬೇಡು. ನನ್ನ ಬಗ್ಗೆ ಮಾತನಾಡುವಾಗ ಎಚ್ಚರ ಇರಲಿ. ರಾಜಕೀಯರಕ್ಕೆ ಬಂದಾಗ ಏನಿತ್ತು. ನಂತರ ಹೇಗೆ ದುಂಡಗಾದರು ಎಂಬುದು ನನಗೆ ಗೊತ್ತಿದೆ. ಸೌಹಾರ್ದ ಬ್ಯಾಂಕಿನ ಹೆಸರಿನಲ್ಲಿ ಎಷ್ಟು ಹಣ ಡಿಪಾಸಿಟ್ ಮಾಡಿಸಿಕೊಂಡು ಅದನ್ನು ಎಲ್ಲೆಲ್ಲಿ ಹೂಡಿಕೆ ಮಾಡಿದ್ದಾರೆಂಬುದು ನನಗೆ ಗೊತ್ತಿದೆ ಎಂದರು.
ಮುಡಾ ಅಕ್ರಮದಲ್ಲಿ ನಾನು ಶಾಮೀಲಾಗಿಲ್ಲ. ಮಾತಾಡಬೇಕಾದರೆ ಗೌರವ ಇರಲಿ. ನಾನು ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ. ಸಿದ್ದರಾಮಯ್ಯ ಜೊತೆ ಸ್ನೇಹ ಅಷ್ಟೇ. ಒಂದು ದಿನ ಕೃಷ್ಣ ಕಚೇರಿಗೆ ಹೋಗಿದ್ದೆ ಅಷ್ಟೇ. ಅಧಿಕಾರವನ್ನ ಒಂದೇ ದಿನ ದುರುಪಯೋಗಪಡಿಸಿಕೊಂಡಿಲ್ಲ. ನನ್ನ ಬಗ್ಗೆ ಮಾತನಾಡುವ ಯೋಗ್ಯತೆ ಯತ್ನಾಳ್‌ಗೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
Advertisement