
ಬೆಂಗಳೂರು: ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರ ಗಂಗಾ ನದಿಯ ತೀರ್ಥ ಸ್ನಾನದ ಕುರಿತು ವ್ಯಂಗ್ಯದ ಮಾತುಗಳನ್ನಾಡುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹಿಂದೂ ಧಾರ್ಮಿಕ ಶ್ರದ್ಧೆಯನ್ನು ಅಪಮಾನಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ವಿಜಯೇಂದ್ರ, ಖರ್ಗೆ ಅವರ ನಾಲಿಗೆಯಿಂದ ಹೊರಡುತ್ತಿರುವ ಮಾತುಗಳು ಬೇಸರ ತರಿಸುತ್ತಿದೆ, ಹೈಕಮಾಂಡ್ ಓಲೈಸಲು ಹಿಂದೂ ಧಾರ್ಮಿಕ ನಂಬಿಕೆ, ಆಚಾರ - ವಿಚಾರಗಳನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರನ್ನು ಟೀಕಿಸುತ್ತಿರುವ ಪರಿ ತುಕ್ಕು ಹಿಡಿದ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತಿದೆ ಎಂದು ಟೀಕಿಸಿದ್ದಾರೆ.
ಎಲ್ಲಿ ಕಾಂಗ್ರೆಸ್ ಆಡಳಿತ ಇರುತ್ತದೋ ಅಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರಗಳು ಹಾಗೂ ರಾಷ್ಟ್ರವಿದ್ರೋಹಿ ಭಯೋತ್ಪಾದಕ ಚಟುವಟಿಕೆಗಳು ತಾಂಡವವಾಡುತ್ತವೆ ಎಂಬುದಕ್ಕೆ ಕರ್ನಾಟಕದ ಕಾಂಗ್ರೆಸ್ ಪಕ್ಷದ ಆಡಳಿತವೇ ಸಾಕ್ಷಿಯಾಗಿದೆ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿನ ಸಮಸ್ಯೆಗಳನ್ನು ಉಲ್ಲೇಖಿಸಿರುವ ವಿಜಯೇಂದ್ರ, ಸರ್ಕಾರಕ್ಕೆ ಕಿವಿ ಹಿಂಡಬೇಕೆಂದು ಇನ್ನೂ ಜ್ಞಾನೋದಯ ಆಗಿಲ್ಲ. 'ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದ್ದರು ಇನ್ನೊಬ್ಬರ ತಟ್ಟೆಯಲ್ಲಿ ನೊಣ ಹುಡುಕುವ” ರೀತಿಯಲ್ಲಿ ಮಾತನಾಡುತ್ತಿದ್ದೀರಿ. ಹಿರಿತನದ ಬಗ್ಗೆ ಗೌರವವಿದೆ. ಆದರೆ ನಿಮ್ಮ ಮಾತುಗಳು ರಾಜಕೀಯ ಪರಿಭಾಷೆಯಿಲ್ಲದ ಪದ ಸಂಸ್ಕೃತಿಯನ್ನು ಮರೆತ ಕೀಳು ಅಭಿರುಚಿಯ ಮಾತುಗಳಾಡಿರುವುದು ನಿಮ್ಮ ಘನತೆ ಕುಗ್ಗಿಸ್ಸಿದೆ ಎಂದಿದ್ದಾರೆ.
Advertisement