
ಬೆಂಗಳೂರು: ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಕ್ಸಿಡೆಂಟಲ್ ಎಐಸಿಸಿ ಅಧ್ಯಕ್ಷ ಎಂದು ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡುವ ವಿಚಾರ ಪಕ್ಷದ ಹೈಕಮಾಂಡ್ ಕೈಯಲ್ಲಿದ್ದು, ಏನು ನಡೆಯುತ್ತಿದೆ ಎಂಬುದನ್ನು ಯಾರು ಹೇಳಲಾಗದು' ಎಂಬ ಕಾಂಗ್ರೆಸ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ಆರ್. ಅಶೋಕ ಅವರು ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ನಮಗೆ ಮತ್ತೊಬ್ಬ 'ಆಕ್ಸಿಡೆಂಟಲ್' ನಾಯಕನನ್ನು ನೀಡಿದೆ ಎಂದೆನಿಸುತ್ತಿದೆ. ಈ ಮೊದಲು 'ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಡಾ.ಮನಮೋಹನ್ ಸಿಂಗ್ ಆಗಿದ್ದರು. ಅವರು ಪ್ರಧಾನಿಯಾಗಿದ್ದರೂ ಯಾವುದೇ ಅಧಿಕಾರ ಇರಲಿಲ್ಲ.'ಈಗ ಆಕ್ಸಿಡೆಂಟಲ್ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಹೈಕಮಾಂಡ್ ಏನು ಯೋಚಿಸುತ್ತಿದೆ ಎಂದು ನನಗೆ ತಿಳಿದಿಲ್ಲ ಎಂದು ಹೇಳುತ್ತಿದ್ದಾರೆ.
ಖರ್ಗೆ ಅವರೇ ನೀವು ಹೈಕಮಾಂಡ್ ಆಗಿಲ್ಲದಿದ್ದರೆ ಇನ್ಯಾರು? ರಾಹುಲ್ ಗಾಂಧಿ? ಸೋನಿಯಾ ಗಾಂಧಿ? ಪ್ರಿಯಾಂಕಾ ಗಾಂಧಿ? ಅಥವಾ ಅದೃಶ್ಯ ಸಮಿತಿಯೇ' ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್‌ನಲ್ಲಿ ಅಧ್ಯಕ್ಷರು ಕೇವಲ ಹೆಸರಿಗೆ ಮಾತ್ರ. ನಿರ್ಣಯಗಳನ್ನು ಜನಪಥದಲ್ಲಿ ಮುಚ್ಚಿದ ಬಾಗಿಲುಗಳ ಹಿಂದೆ ತೆಗೆದುಕೊಳ್ಳುಲಾಗುತ್ತದೆ ಎಂದು ಆರೋಪಿಸಿದ್ದಾರೆ.
'ಕಾಂಗ್ರೆಸ್ ಪಕ್ಷವನ್ನು ಮಲ್ಲಿಕಾರ್ಜುನ ಖರ್ಗೆ ಅವರು ಮುನ್ನಡೆಸುತ್ತಿಲ್ಲ. ಅದೇ ಸ್ಕ್ರಿಪ್ಟ್ ಆದರೆ ಹೊಸ ನಟ. ಎಲ್ಲವೂ ಗಾಂಧಿ ಕುಟಂಬದಿಂದ ನಿರ್ದೇಶಿಸಲ್ಪಟ್ಟಿದೆ' ಎಂದು ಹೇಳಿದ್ದಾರೆ.
ಬಿಜೆಪಿ ಎಂಎಲ್‌ಸಿ ಮತ್ತು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತಗೊಂಡಿದೆ. ಕಾಂಗ್ರೆಸ್‌ನಲ್ಲಿ ಅತೃಪ್ತ ಶಾಸಕರ ಸಂಖ್ಯೆ ಹೆಚ್ಚುತ್ತಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಬೆಂಗಳೂರಿಗೆ ಭೇಟಿ ನೀಡಿರುವುದು ಇದರಿಂದ ಸ್ಪಷ್ಟವಾಗಿದೆ, ಸಿಎಂ ಮತ್ತು ಡಿಸಿಎಂ ತಮ್ಮ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಯಾವುದೇ ಅಭಿವೃದ್ಧಿ ಕಾರ್ಯಗಳಿಲ್ಲ ಎಂದು ಆಡಳಿತ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ. ಅವರ ವಿಧಾನಸಭಾ ಕ್ಷೇತ್ರಗಳಲ್ಲಿ ಜನರನ್ನು ಎದುರಿಸುವುದು ಅವರಿಗೆ ಕಷ್ಟಕರವಾಗಿದೆ ಎಂದು ಹೇಳಿದ್ದಾರೆ.
Advertisement