
ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡುವ ವಿಚಾರ ಪಕ್ಷದ ಹೈಕಮಾಂಡ್ ಕೈಯಲ್ಲಿದೆ' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, 'ಹೈಕಮಾಂಡ್‌ನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಯಾರು ಹೇಳಲಾಗದು. ಮುಂದಿನ ಕ್ರಮ ಕೈಗೊಳ್ಳುವ ಹಕ್ಕು ಹೈಕಮಾಂಡ್ ಗಿದೆ. ಆದರೆ, ಯಾರೂ ಅನಗತ್ಯವಾಗಿ ಸಮಸ್ಯೆ ಸೃಷ್ಟಿಸಬಾರದು' ಎಂದರು.
'ಸುರ್ಜೇವಾಲಾ ಅವರು ರಾಜ್ಯಕ್ಕೆ ಬಂದಿದ್ದಾರೆ. ಶಾಸಕರು ಏನು ಹೇಳುತ್ತಾರೆ, ಜೊತೆಗೆ ಏನೇನು ನಡೆದಿದೆ ಎಂದು ಅವರು ಕೇಳುತ್ತಾರೆ. ಅದನ್ನು ನೋಡಿಕೊಂಡು ಮುಂದೇನು ಮಾಡಬೇಕೆಂದು ನೋಡೋಣ' ಎಂದರು. ಸಚಿವರು, ಶಾಸಕರ ವಿಭಿನ್ನ ಹೇಳಿಕೆಗಳ ಕುರಿತು ಕೇಳಿದ ಪ್ರಶ್ನೆಗೆ, 'ಅವರೆಲ್ಲರ ಹೇಳಿಕೆಗಳಿಗೆ ನಾನು ಉತ್ತರ ಕೊಡಲ್ಲ. ನಾನು ಉತ್ತರ ಕೊಡುವುದು ಎಐಸಿಸಿ ಮಟ್ಟದ್ದಕ್ಕೆ ಮಾತ್ರ. ಇಲ್ಲಿಯ ಪ್ರತಿಯೊಂದಕ್ಕೂ ಉತ್ತರ ಕೊಡಲು ಹೋದರೆ, ಸಾಕಷ್ಟು ವಿಚಾರಗಳಿವೆ' ಎಂದು ಖರ್ಗೆ ಗರಂ ಆದರು.
ಕಾಂಗ್ರೆಸ್ ಪಕ್ಷದ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮಾತನಾಡಿ, 'ಕಾಂಗ್ರೆಸ್ ಗ್ಯಾರಂಟಿ ಯೋಜನೆ ಬಗ್ಗೆ ಶಾಸಕರಿಂದ ಮಾಹಿತಿ ಪಡೆಯುತ್ತಿದ್ದೇವೆ. ಕಾಂಗ್ರೆಸ್ ಸಂಘಟನೆ ಅವರವರ ಕ್ಷೇತ್ರದಲ್ಲಿ ಹೇಗಿದೆ ಎಂಬ ವರದಿ ಪಡೆಯುತ್ತೇನೆ. ಮುಂಚೂಣಿ ಘಟಕಗಳು ಹೇಗೆ ಕೆಲಸ ಮಾಡುತ್ತಿವೆ ಎಂಬ ಬಗ್ಗೆ ಪರಾಮರ್ಶೆ ಮಾಡುತ್ತಿದ್ದೇವೆ ಎಂದರು.
ಎಷ್ಟು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಾಗುತ್ತಿವೆ ಎಂದೂ ಮಾಹಿತಿ ಪಡೆಯುತ್ತೇವೆ.ಇದರಿಂದ ಸಿಎಂ, ಸಚಿವರಿಗೆ ಮಾಹಿತಿ ನೀಡಲು, ಅರ್ಥ ಮಾಡಿಕೊಳ್ಳಲು ಅನುಕೂಲ ಆಗಲಿದೆ. ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಶಾಸಕರಿಂದ ಮಾಹಿತಿ ಪಡೆಯುತ್ತಿದ್ದೇವೆ. ಸಂಘಟನಾತ್ಮಕ ಚಟುವಟಿಕೆಗಳನ್ನು ಎಐಸಿಸಿ, ಕೆಪಿಸಿಸಿ ಜಂಟಿಯಾಗಿ ಮಾಡಬೇಕಿದೆ ಎಂದರು. ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು, ಪರಾಜಿತ ಅಭ್ಯರ್ಥಿಗಳನ್ನು ಕೂಡ ಸಭೆಗೆ ಕರೆಯುತ್ತೇವೆ.ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆ. ಬಳಿಕ ಸಿಎಂ, ಡಿಸಿಎಂ ಜೊತೆಗೂ ಅಭಿವೃದ್ಧಿ ವಿಚಾರವಾಗಿ ಮಾತನಾಡುತ್ತೇವೆ ಎಂದೂ ಹೇಳಿದರು.
ಸಹಕಾರ ಸಚಿವ ಮತ್ತು ಸಿದ್ದರಾಮಯ್ಯ ಅವರ ಆಪ್ತ ಕೆ.ಎನ್. ರಾಜಣ್ಣ ಅವರ "ಸೆಪ್ಟೆಂಬರ್ ಕ್ರಾಂತಿ"ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ಬಾಲಕೃಷ್ಣ, "ಈ ಮಾತನಾಡುತ್ತಿರುವ ಕೆಲವು ಸಚಿವರು ಮುಂದಿನ ಚುನಾವಣೆಗೂ ಸ್ಪರ್ಧಿಸುವುದಿಲ್ಲ. ಇದು ಮುಂದಿನ ಚುನಾವಣೆಗೆ ಸ್ಪರ್ಧಿಸುವವರ ಮೇಲೆ ಪರಿಣಾಮ ಬೀರುತ್ತದೆ" ಎಂದು ಹೇಳಿದರು.
Advertisement