
ಬೆಂಗಳೂರು: ಮಾಧ್ಯಮಗಳ ಮುಂದೆ ಕೈ ಕೈ ಹಿಡಿದು ಒಗ್ಗಟ್ಟು ಪ್ರದರ್ಶನದ ನಾಟಕ, ತೆರೆಮರೆಯಲ್ಲಿ ಬೆಂಬಲಿಗರ ಮೂಲಕ ಬೆನ್ನಿಗೆ ಚೂರಿ ಇರಿತ. ಒಟ್ಟಿನಲ್ಲಿ ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ, ಸಿದ್ದರಾಮಯ್ಯ ಹಾಗು ಡಿ.ಕೆ. ಶಿವಕುಮಾರ್ ಅವರ ಜಗಳದಲ್ಲಿ ಕರ್ನಾಟಕ ಬಡವಾಗುತ್ತಿದೆ ಎಂದು ಬಿಜೆಪಿ ಬುಧವಾರ ಟೀಕಿಸಿದೆ.
ರಾಮನಗರ ಶಾಸಕ ಹೆಚ್.ಎ.ಇಕ್ಬಾಲ್ ಹುಸೇನ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ನೋಟಿಸ್ ಜಾರಿ ಮಾಡಿರುವ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಅಶೋಕ್ ಅವರು, ಡಿಕೆ.ಶಿವಕುಮಾರ್ ಕುರಿತು ವ್ಯಂಗ್ಯವಾಡಿದ್ದಾರೆ.
ಮಗು ಚಿವುಟೋದು ಅವರೇ ತೊಟ್ಟಿಲು ತೂಗೋದು ಅವರೇ, ತುಂಬಾ ಚೆನ್ನಾಗಿದೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ ನಿಮ್ಮ ನಾಟಕ ಎಂದು ವ್ಯಂಗ್ಯವಾಡಿದ್ದಾರೆ.
ಮಗು ಚಿವುಟೋದು ಅವರೇ ತೊಟ್ಟಿಲು ತೂಗೋದು ಅವರೇ...ತುಂಬಾ ಚೆನ್ನಾಗಿದೆ ಡಿಸಿಎಂ ಡಿಕೆ.ಶಿವಕುಮಾರ್ ಅವರೇ ನಿಮ್ಮ ನಾಟಕ. ಮಾಧ್ಯಮಗಳ ಮುಂದೆ ಕೈ ಕೈ ಹಿಡಿದು ಒಗ್ಗಟ್ಟು ಪ್ರದರ್ಶನದ ನಾಟಕ, ತೆರೆಮರೆಯಲ್ಲಿ ಬೆಂಬಲಿಗರ ಮೂಲಕ ಬೆನ್ನಿಗೆ ಚೂರಿ ಇರಿತ. ಒಟ್ಟಿನಲ್ಲಿ ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ, ಸಿದ್ದರಾಮಯ್ಯ ಹಾಗು ಡಿ.ಕೆ. ಶಿವಕುಮಾರ್ ಅವರ ಜಗಳದಲ್ಲಿ ಕರ್ನಾಟಕ ಬಡವಾಗುತ್ತಿದೆ ಎಂದು ಟೀಕಿಸಿದ್ದಾರೆ.
ಮತ್ತೊಂದು ಪೋಸ್ಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧವೂ ಅಶೋಕ್ ಕಿಡಿಕಾರಿದ್ದಾರೆ.
ಲಾಟರಿ ಸಿಎಂ ಸಿದ್ದರಾಮಯ್ಯ ಅವರೇ ನಿಮ್ಮ ಪಕ್ಷದ ಶಾಸಕರೇ ನಿಮ್ಮ ಸರ್ಕಾರಕ್ಕೆ ಛೀ...ಥೂ ಎಂದು ಉಗಿಯುತ್ತಿದ್ದಾರೆ. ಹೈಕಮಾಂಡ್ ಏಜೆಂಟ್ ಸುರ್ಜೇವಾಲ ಅವರಿಗೆ ಒಂದೆರಡು ಸೂಟ್ ಕೇಸ್ ಕೊಟ್ಟು ಸುಮ್ಮನಾಗಿಸಬಹುದು. ಹೈಕಮಾಂಡ್ ಗೆ ಭರಪೂರ ಕಪ್ಪ ಕಾಣಿಕೆ ಕೊಟ್ಟು ಬುಟ್ಟಿಗೆ ಹಾಕಿಕೊಳ್ಳಬಹುದು. ಶಾಸಕರಿಗೆ ಹೆದರಿಸಿ, ಬೆದರಿಸಿ ಅವರ ಬಾಯಿ ಮುಚ್ಚಿಸಬಹುದು. ಆದರೆ ಜನಸಾಮಾನ್ಯರ ಬಾಯಿ ಹೇಗೆ ಮುಚ್ಚಿಸುತ್ತೀರಿ? ಇನ್ನಾದರೂ ಈ ಭಂಡ ಬಾಳು ಸಾಕು ಮಾಡಿ. ರಾಜೀನಾಮೆ ಕೊಟ್ಟು ಈ ನಾಟಕಕ್ಕೆ ತೆರೆ ಎಳೆಯಿರಿ ಎಂದು ತಿಳಿಸಿದ್ದಾರೆ.
ಹೈಕಮಾಂಡ್ ಏಜೆಂಟ್ ಸುರ್ಜೇವಾಲಾ ಅವರ ಬಳಿ ನಿಮ್ಮ ಶಾಸಕರು ಸಾಲು ಸಾಲು ದೂರುಗಳನ್ನು ಕೊಡುತ್ತಿದ್ದಾರೆ. ನಿಮ್ಮ ಕಾಂಗ್ರೆಸ್ ಸರ್ಕಾರದ ಆಡಳಿತ ತೃಪ್ತಿ ತಂದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಎಲ್ಲ ಇಲಾಖೆಗಳಲ್ಲಿ ಲಂಚ, ಭ್ರಷ್ಟಾಚಾರ ನಡೆಯುತ್ತಿದೆ ಎಂದು ನಿಮ್ಮ ಸರ್ಕಾರದಲ್ಲಿ ನಡೆಯುತ್ತಿರುವ ಹಗಲು ದರೋಡೆಯನ್ನು ಬಯಲು ಮಾಡುತ್ತಿದ್ದಾರೆ. ಸಚಿವರು ಶಾಸಕರನ್ನು ಭೇಟಿ ಕೂಡ ಮಾಡುತ್ತಿಲ್ಲ ಎಂದು ಸಚಿವರ ಕಾರ್ಯವೈಖರಿ ಬಗ್ಗೆ ಕಂಪ್ಲೇಟ್ ಮಾಡಿದ್ದಾರೆ. ನಯಾ ಪೈಸೆ ಅನುದಾನವಿಲ್ಲದೆ ತಮ್ಮ ತಮ್ಮ ಕ್ಷೇತ್ರಗಳಿಗೆ ಹೋಗಲೂ ಮುಖ ಇಲ್ಲ ಎಂದು ಶಾಸಕರು ಅಸಹಾಯಕತೆ ಹಂಚಿಕೊಂಡಿದ್ದಾರೆ. ಇನ್ನೆಷ್ಟು ದಿನ ಸ್ವಾಮಿ ಈ ಭಂಡ ಬಾಳು? ರಾಜೀನಾಮೆ ಕೊಟ್ಟು ತಮ್ಮ ಗೌರವ ಉಳಿಸಿಕೊಳ್ಳಿ. ಕರ್ನಾಟಕದ ಗೌರವವನ್ನೂ ಉಳಿಸಿ ಎಂದು ಹೇಳಿದ್ದಾರೆ.
Advertisement