
ಬೆಂಗಳೂರು: ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ರವಿ ಕುಮಾರ್ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರಿಂದ ಮಹಿಳೆಯರ ನಿಂದನೆ ನಿರಂತರವಾಗಿ ನಡೆಯುತ್ತಿದೆ. ಓರ್ವ ಹಿರಿಯ ಮಹಿಳಾ ಐಎಎಸ್ ಅಧಿಕಾರಿ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ರೀತಿ ಬಿಜೆಪಿಗರ ಮನಸ್ಥಿತಿ ಎಂಥಹದ್ದು ಎಂಬುದನ್ನು ತೋರಿಸುತ್ತದೆ. ರವಿಕುಮಾರ್ ಅವರು ಸಮಸ್ತ ಮಹಿಳಾ ಕುಲಕ್ಕೆ ಮಾಡಿರುವ ಅವಮಾನ ಇದಾಗಿದೆ. ರವಿಕುಮಾರ್ ಅವರ ಹೇಳಿಕೆಯನ್ನು ಕೇಂದ್ರ ಬಿಜೆಪಿ ನಾಯಕರು ಸಮರ್ಥಿಸಿಕೊಳ್ಳುವರೇ ಎಂದು ಪ್ರಶ್ನಿಸಿದ್ದಾರೆ.
ಕಳೆದ ಬೆಳಗಾವಿ ಅಧಿವೇಶನದ ವೇಳೆಯಲ್ಲಿ ಸಿಟಿ ರವಿ ಅವರು ನನ್ನ ಬಗ್ಗೆ ಕೆಟ್ಟಾಗಿ ಮಾತನಾಡಿದಾಗ ಆ ಪಕ್ಷದ ನಾಯಕರು ಒಂದೂ ಮಾತನಾಡಲಿಲ್ಲ. ಇಂಥ ನಾಯಕರ ಹೇಳಿಕೆಗಳಿಗೆ ಕೇಂದ್ರದ ನಾಯಕರು ಪರೋಕ್ಷ ಬೆಂಬಲ ನೀಡಿದಂತಿದೆ. ಇದು ಮಹಿಳೆಯರಿಗೆ ಬಿಜೆಪಿ ನಾಯಕರು ಕೊಡುವ ಗೌರವ ಎಂತದ್ದು ಎಂಬುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಇಂತಹ ಅವಹೇಳನಕಾರಿ ಪದಗಳನ್ನು ಬಳಸುವ ಬಿಜೆಪಿ ನಾಯಕರಿಗೆ ಬುದ್ದಿ ಭ್ರಮಣೆಯಾಗಿದೆ ಅನಿಸುತ್ತದೆ. ಇನ್ನು ಮುಂದಾದರೂ ಇಂತಹ ಹೇಳಿಕೆಗಳನ್ನು ನೀಡದೆ, ಜವಾಬ್ದಾರಿಯಿಂದ ವರ್ತಿಸಲಿ ಎಂದು ತಿಳಿಸಿದರು.
ಇದೇ ವೇಳೆ ಸಾರ್ವಜನಿಕವಾಗಿ ಮಹಿಳಾ ಅಧಿಕಾರಿ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ರವಿಕುಮಾರ್ ಅವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ತಮ್ಮ ತಪ್ಪನ್ನು ಅರಿವು ಮಾಡಿಕೊಂಡು ಕ್ಷಮೆ ಕೇಳಲಿ, ಇಲ್ಲವಾದರೆ ರವಿಕುಮಾರ್ ಅವರು ಸಾರ್ವಜನಿಕರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
Advertisement