
ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ವಿರೋಧಿಸುವ ಭರದಲ್ಲಿ ದೇಶದ ಸಾಧನೆ ಹಾಗೂ ಸಂಶೋಧಕರು-ವಿಜ್ಞಾನಿಗಳ ಸಮೂಹವನ್ನೇ ಕಾಂಗ್ರೆಸ್ ಅವಮಾನಿಸುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಕ್ಷಮೆಯಾಚಿಸಬೇಕೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಶುಕ್ರವಾರ ಆಗ್ರಹಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಹಾಗೂ ಆ ಪಕ್ಷದ ನಾಯಕರು ಯಾವುದೇ ಆಧಾರವಿಲ್ಲದೆ ಕೋವಿಡ್ ಲಸಿಕೆಯನ್ನು ಅನುಮಾನಿಸುತ್ತಿದ್ದಾರೆ. ಕೋಟ್ಯಾಂತರ ಜನರ ಜೀವ ಉಳಿಸಿದ ವಿಜ್ಞಾನಿಗಳ ಸಮುದಾಯಕ್ಕೆ ಅಪಮಾನ ಮಾಡುತ್ತಿದ್ದಾರೆಂದು ವಾಗ್ದಾಳಿ ನಡೆಸಿದ್ದಾರೆ.
ದೇಶದಲ್ಲಿ ಕಾಂಗ್ರೆಸ್ ಪಕ್ಷ 60 ವರ್ಷ ಆಡಳಿತ ನಡೆಸಿದರೂ ಒಂದೇ ಒಂದು ಸ್ವದೇಶಿ ವ್ಯಾಕ್ಸಿನ್ ಸಿದ್ಧಪಡಿಸಲಿಲ್ಲ. ಇವರ ಕಾಲದಲ್ಲಿ ಎಲ್ಲವೂ ಆಮದಾಗುತ್ತಿತ್ತು ಎಂದು ವಾಗ್ದಾಳಿ ನಡೆಸಿದರು.
ಕೋವಿಡ್ ವೇಳೆ ಕೇಂದ್ರ ಸರ್ಕಾರ ಸ್ವದೇಶಿ ವ್ಯಾಕ್ಸಿನ್ ಸಿದ್ಧಪಡಿಸಿ ದೇಶದ ಜನರಿಗೆ 240 ಕೋಟಿ ಡೋಸ್ ನೀಡಿದೆ. 110 ರಿಂದ 120 ಕೋಟಿ ಜನರು ವ್ಯಾಕ್ಸಿನ್ ಪಡೆದಿದ್ದಾರೆ. ಅಲ್ಲದೇ, 150 ದೇಶಗಳಿಗೆ ಭಾರತ ವ್ಯಾಕ್ಸಿನ್ ಪೂರೈಸಿದೆ. ಭಾರತದ ಈ ಸಾಧನೆಯನ್ನು ಮುಕ್ತವಾಗಿ ಪ್ರಶಂಶಿಸಬೇಕು. ಆದರೆ, ಕಾಂಗ್ರೆಸ್ ಮಾಡುತ್ತಿರುವುದೇನು. ಇದು ದೇಶದ ಬಗ್ಗೆ ಕಾಂಗ್ರೆಸ್‌ಗಿರುವ ಮನಸ್ಥಿತಿಯನ್ನು ತೋರ್ಪಡಿಸುತ್ತಿದೆ ಎಂದು ಟೀಕಿಸಿದರು.
ಆರ್‌ಡಿಪಿಆರ್ ಮತ್ತು ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಆರ್‌ಎಸ್‌ಎಸ್ ನಿಷೇಧ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿ, ಖರ್ಗೆ ಅವರ ನಾಯಕ ರಾಹುಲ್ ಗಾಂಧಿ ಕುಟುಂಬ ಆರ್‌ಎಸ್‌ಎಸ್ ಅನ್ನು ನಿಷೇಧಿಸಲು ಪ್ರಯತ್ನಿಸಿತು, ಆದರೆ, ಅದು ವಿಫಲವಾಯಿತು. ಆರ್‌ಎಸ್‌ಎಸ್ ಇನ್ನೂ ದೊಡ್ಡದಾಗಿ ಬೆಳೆಯುತ್ತದೆ ಎಂದರು.
Advertisement