
ಇತ್ತೀಚೆಗೆ ಪಕ್ಷದೊಳಗಿನ ಆಂತರಿಕ ಜಗಳವು, ಶಾಸಕರು ನೀಡಿದ ಹೇಳಿಕೆಗಳು ರಾಜ್ಯ ಕಾಂಗ್ರೆಸ್ ನಾಯಕರಿಗೆ ಮತ್ತು ಹೈಕಮಾಂಡ್ ಗೆ ಮುಜುಗರವನ್ನುಂಟುಮಾಡಿದ್ದು ಸುಳ್ಳಲ್ಲ. ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಒಂದು ರೀತಿಯ ಆತಂಕದ ಮೌನ ಆವರಿಸಿದೆ. ಪಕ್ಷದ ಉನ್ನತ ನಾಯಕರ ಮಧ್ಯಸ್ಥಿಕೆ ವಹಿಸುವಲ್ಲಿ ಯಶಸ್ವಿಯಾಗಿದ್ದಾರೆಯೇ ಅಥವಾ ಮುಂದೆ ಬರಬಹುದಾದ ಬಿರುಗಾಳಿಗೆ ಮುನ್ನ ಅದು ಶಾಂತವಾಗಿದೆಯೇ ಮತ್ತು ಈ ವರ್ಷದ ನವೆಂಬರ್‌ನಲ್ಲಿ ಸರ್ಕಾರದಲ್ಲಿ ಹಲವು ಬದಲಾವಣೆಗಳಾಗಲಿವೆಯೇ ಎಂದು ಕಾಲವೇ ನಿರ್ಧರಿಸಲಿದೆ.
2023 ರಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುವ ಮೊದಲು ಅಧಿಕಾರ ಹಂಚಿಕೆ ಒಪ್ಪಂದದ ಬಗ್ಗೆ ಪಕ್ಷದ ಹೈಕಮಾಂಡ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೊರತುಪಡಿಸಿ ಯಾರಿಗೂ ತಿಳಿದಿಲ್ಲ. ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಮಧ್ಯೆ ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆಯಿದೆ ಎಂಬ ಬಗ್ಗೆ ಪಕ್ಷದ ಶಾಸಕರ ಒಂದು ವರ್ಗದಲ್ಲಿ ಅಸಮಾಧಾನ ಮತ್ತು ಅನೇಕ ಹಿರಿಯ ಶಾಸಕರು ಮಂತ್ರಿಗಳಾಗಬೇಕೆಂಬ ಆಕಾಂಕ್ಷೆಗಳು ಸರ್ಕಾರದಲ್ಲಿ ಇತ್ತೀಚೆಗೆ ಬಿಕ್ಕಟ್ಟಿಗೆ ಪ್ರಮುಖ ಕಾರಣಗಳಾಗಿವೆ, ಇದು ಕೆಲವೊಮ್ಮೆ ಉನ್ನತ ನಾಯಕತ್ವವನ್ನು ಸಾಕಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.
ಸರ್ಕಾರದ ಪ್ರಮುಖ ಖಾತರಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಶಾಸಕರ ಕೊಡುಗೆಯನ್ನು ನಿರ್ಣಯಿಸುವ ಮತ್ತು ಅವರ ಆಕಾಂಕ್ಷೆಗಳನ್ನು ವ್ಯಕ್ತಪಡಿಸಲು ವೇದಿಕೆಯನ್ನು ಒದಗಿಸುವ ಕಸರತ್ತಿನ ನಡುವೆ ಡಿ ಕೆ ಶಿವಕುಮಾರ್ ರಾಜಕೀಯ ತಾಪಮಾನವನ್ನು ತಣ್ಣಗಾಗಿಸಲು ಉಪಕ್ರಮವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
5 ವರ್ಷ ನಾನೇ ಸಿಎಂ ಆಗಿರುತ್ತೇನೆ ಎಂದು ಸಿದ್ದರಾಮಯ್ಯನವರು ಹೇಳಿದ್ದರೆ, ನನಗೆ ಬೇರೆ ಯಾವ ಆಯ್ಕೆಗಳಿವೆ, ನಾನು ಅವರಿಗೆ ಬೆಂಬಲ ನೀಡಲೇಬೇಕು, ಅವರನ್ನು ಬೆಂಬಲಿಸಬೇಕು. ನನಗೆ ಅದಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದು ಹೇಳಿರುವುದು ತಮ್ಮ ಸ್ವಾರ್ಥ ರಾಜಕೀಯ ಲಾಭಕ್ಕಾಗಿ ವ್ಯವಸ್ಥೆಯನ್ನು ಅಲುಗಾಡಿಸಲು ಸಾಧ್ಯವಿಲ್ಲ, ಬದಲಿಗೆ ತಮ್ಮ ಸರದಿ ಬರುವವರೆಗೆ ತಾಳ್ಮೆಯಿಂದ ಕಾಯುವ ವ್ಯಕ್ತಿ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಹಿಂದೆ ಡಿ ಕೆ ಶಿವಕುಮಾರ್ ಅವರನ್ನು ಅಕ್ರಮ ಆಸ್ತಿಗಳಿಗೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ಬಂಧಿಸಿದಾಗ ಬಿಕ್ಕಟ್ಟಿನ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ಅದನ್ನು ಎದುರಿಸಿದ್ದ ಅವರು, ಕಲ್ಲುಬಂಡೆಯಂತೆ ನಿಂತಿದ್ದರು. ಕಾಂಗ್ರೆಸ್ ಸರ್ಕಾರ ರಚನೆಯಾಗಿ ಎರಡೂವರೆ ವರ್ಷವಾಗುತ್ತಾ ಬಂದಿದೆ. ಈ ಹಂತದಲ್ಲಿ, ಹೈಕಮಾಂಡ್‌ನ ಪೂರ್ಣ ಒಪ್ಪಿಗೆಯಿಲ್ಲದೆ ನಾಯಕತ್ವದ ಯಾವುದೇ ಹಕ್ಕು ಪಕ್ಷಕ್ಕೆ ಬಿಕ್ಕಟ್ಟನ್ನು ಉಂಟುಮಾಡಬಹುದು, ವಿರೋಧ ಪಕ್ಷಗಳು ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಅನುಕೂಲವಾಗಬಹುದು.
2023 ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಭವಿಷ್ಯವನ್ನು ತಿರುಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಪಕ್ಷದ ಕಟ್ಟಾ ನಿಷ್ಠಾವಂತ ಡಿ ಕೆ ಶಿವಕುಮಾರ್, ಕಾಂಗ್ರೆಸ್ ನ್ನು ಮೀರಿ ಎಂದಿಗೂ ನೋಡಲಿಲ್ಲ ಮತ್ತು ಪಕ್ಷದ ರಾಜ್ಯ ಅಧ್ಯಕ್ಷರಾಗಿ, 2028 ರ ಚುನಾವಣೆಗಳ ನಂತರ ಪಕ್ಷವು ಅಧಿಕಾರಕ್ಕೆ ಮರಳುವುದನ್ನು ಖಚಿತಪಡಿಸಿಕೊಳ್ಳುವ ಬಗ್ಗೆ ಆಗಾಗ್ಗೆ ಮಾತನಾಡುತ್ತಾರೆ. ಅದು ದೀರ್ಘ ಪ್ರಯತ್ನವಾಗಿರಬಹುದು. ರಾಜಕೀಯ ಸಮೀಕರಣಗಳು ಕೆಲವೇ ತಿಂಗಳುಗಳು ಅಥವಾ ವಾರಗಳಲ್ಲಿ ಸಂಪೂರ್ಣವಾಗಿ ಬದಲಾಗಬಹುದು, ಆದ್ದರಿಂದ ಎರಡೂವರೆ ವರ್ಷಗಳಿಗೂ ಹೆಚ್ಚು ಸಮಯ ರಾಜಕೀಯದಲ್ಲಿ ದೀರ್ಘ ಸಮಯವೇ ಆಗಿದೆ.
ಸಂಪುಟ ಪುನರ್ರಚನೆ
ಸದ್ಯಕ್ಕೆ, ತಮಗೆ ಯಾವುದೇ ಆಯ್ಕೆಗಳಿಲ್ಲ ಎಂಬ ಶಿವಕುಮಾರ್ ಹೇಳಿಕೆಗಳ ನಂತರ, ಐದು ವರ್ಷಗಳ ಪೂರ್ಣ ಅವಧಿಗೆ ತಾವು ಮುಖ್ಯಮಂತ್ರಿಯಾಗಿ ಮುಂದುವರಿಯುವುದಾಗಿ ಸಿದ್ದರಾಮಯ್ಯ ಹೇಳಿಕೆ ನೀಡಿರುವುದು ವ್ಯವಸ್ಥೆಯಲ್ಲಿ ಯಾವುದೇ ಪ್ರಮುಖ ಬದಲಾವಣೆ ಇಲ್ಲದಿರಬಹುದು ಎಂದು ಸೂಚಿಸುತ್ತದೆ. ವರ್ಷಾಂತ್ಯ ವೇಳೆಗೆ ಹಿರಿಯ ನಾಯಕರಲ್ಲಿರುವ ಅಸಮಾಧಾನವನ್ನು ಪರಿಹರಿಸಲು ಅವರನ್ನು ಸಂಪುಟದಲ್ಲಿ ಸೇರಿಸಿಕೊಳ್ಳುವ ಮೂಲಕ ಸರ್ಕಾರದಲ್ಲಿ ಪುನರ್ರಚನೆಯಾಗಬಹುದು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಲ್ಲಾ ಆಯ್ಕೆಗಳು ಮುಕ್ತವಾಗಿವೆ ಎಂದು ಹೇಳಿದ್ದಾರೆ. ಸರ್ಕಾರದ ಭವಿಷ್ಯ ಹೈಕಮಾಂಡ್ ಕೈಯಲ್ಲಿದೆ. ಇದು ಹೈಕಮಾಂಡ್‌ಗೆ ಬಿಟ್ಟದ್ದು, ಹೈಕಮಾಂಡ್‌ಗೆ ಮುಂದಿನ ಕ್ರಮ ತೆಗೆದುಕೊಳ್ಳುವ ಅಧಿಕಾರವಿದೆ. ಆದರೆ ಅನಗತ್ಯವಾಗಿ, ಒಬ್ಬರು ಸಮಸ್ಯೆಗಳನ್ನು ಸೃಷ್ಟಿಸಬಾರದು ಎಂದು ಖರ್ಗೆ ಇತ್ತೀಚೆಗೆ ಹೇಳಿದ್ದರು. ಅಕ್ಟೋಬರ್‌ನಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಕೆಲವು ಕಾಂಗ್ರೆಸ್ ನಾಯಕರು ಮಾತನಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
ಖರ್ಗೆ ಅವರ ಹೇಳಿಕೆಗಳು ಬಿಜೆಪಿಯಿಂದ ತೀವ್ರ ಟೀಕೆಗೆ ಗುರಿಯಾದವು, ಪಕ್ಷದ ಅಧ್ಯಕ್ಷರಾಗಿ ಅವರು ಹೈಕಮಾಂಡ್ ಎಂದು ಅವರಿಗೆ ನೆನಪಿಸಲು ಪ್ರಯತ್ನಿಸಿದರು. ಬಹುಶಃ ಖರ್ಗೆ ಅವರು "ಹೈಕಮಾಂಡ್" ಎಂದು ಹೇಳಿದ್ದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ತಮ್ಮನ್ನು ಒಳಗೊಂಡ ಸಾಮೂಹಿಕ ನಾಯಕತ್ವದ ಬಗ್ಗೆ ಇರಬಹುದು.
ಈಗ ಕಾಣುತ್ತಿರುವಂತೆ, ಕರ್ನಾಟಕದಲ್ಲಿ ನಾಯಕತ್ವದ ವಿಷಯದ ಬಗ್ಗೆ ನಿರ್ಧರಿಸುವುದು ಹೈಕಮಾಂಡ್‌ಗೆ ಸುಲಭದ ಕೆಲಸವಲ್ಲ, ಇದಕ್ಕೆ ಹಲವಾರು ಕಾರಣಗಳಿವೆ. ಒಬಿಸಿಗಳು ಮತ್ತು ಅಲ್ಪಸಂಖ್ಯಾತ ಸಮುದಾಯದಲ್ಲಿ ಸಿದ್ದರಾಮಯ್ಯನವರಿಗೆ ಇರುವ ಗಣನೀಯ ಬೆಂಬಲ ಮತ್ತು ಬಿಹಾರ ಸೇರಿದಂತೆ ಇತರ ರಾಜ್ಯಗಳಲ್ಲಿ ಮುಂಬರುವ ಚುನಾವಣೆಗಳು ಹೈಕಮಾಂಡ್‌ಗೆ ವಿಷಯಗಳನ್ನು ಸಂಕೀರ್ಣಗೊಳಿಸುತ್ತವೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ರಾಹುಲ್ ಗಾಂಧಿ ಆಗಾಗ್ಗೆ ಒಬಿಸಿ ವಿಷಯವನ್ನು ಎತ್ತುವ ಸಮಯದಲ್ಲಿ, ಹಿಂದುಳಿದ ವರ್ಗಗಳ ಪ್ರತಿಪಾದಕ ಎಂದು ತಮ್ಮನ್ನು ತಾವು ಬಿಂಬಿಸಿಕೊಳ್ಳುವ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವ ಸಾಧ್ಯತೆ ಕಡಿಮೆ.
ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ, ಒಬಿಸಿ ಸಮುದಾಯದ ಕಲ್ಯಾಣಕ್ಕಾಗಿ ಪ್ರಮುಖ ವಿಷಯಗಳು ಮತ್ತು ಉಪಕ್ರಮಗಳನ್ನು ಚರ್ಚಿಸಲು ಎಐಸಿಸಿ, ಒಬಿಸಿ ಇಲಾಖೆಯ ಸಲಹಾ ಮಂಡಳಿಯನ್ನು ರಚಿಸಿದೆ. ಸಮಿತಿಯ ಮೊದಲ ಸಭೆ ಜುಲೈ 15 ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಒಬಿಸಿಯಿಂದ ಬಂದ ಮುಖ್ಯಮಂತ್ರಿಯನ್ನು ಪ್ರಬಲ ಒಕ್ಕಲಿಗ ಸಮುದಾಯದ ನಾಯಕನೊಂದಿಗೆ ಬದಲಾಯಿಸುವುದು ಬಿಜೆಪಿಗೆ ಪ್ರಬಲ ರಾಜಕೀಯ ಅಸ್ತ್ರವನ್ನು ಒದಗಿಸುತ್ತದೆ. ಕರ್ನಾಟಕದಲ್ಲಿ ನಾಯಕತ್ವದ ವಿಷಯದ ಬಗ್ಗೆ ಎದ್ದಿರುವ ಬಿರುಗಾಳಿ ಎಲ್ಲವನ್ನೂ ಕಬಳಿಸಬಹುದು ಮತ್ತು ಪಕ್ಷವು ಕರ್ನಾಟಕವನ್ನು ಮೀರಿ ಭಾರೀ ಬೆಲೆ ತೆರಬೇಕಾಗಬಹುದು ಎಂದು ಪಕ್ಷವು ಜಾಗರೂಕವಾಗಿರಬಹುದು. ಅದು ರಾಜಸ್ಥಾನವಾಗಲಿ ಅಥವಾ ಮಧ್ಯಪ್ರದೇಶವಾಗಲಿ, ತನ್ನದೇ ಪಕ್ಷದ ಇಬ್ಬರು ಪ್ರಬಲ ನಾಯಕರು ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧಿಸುತ್ತಿರುವುದರಿಂದ ಕಾಂಗ್ರೆಸ್ ಹೈಕಮಾಂಡ್‌ಗೆ ಕಷ್ಟಕರವಾಗಿರುತ್ತದೆ.
ಕರ್ನಾಟಕದಲ್ಲಿ, ಪಕ್ಷ ಮತ್ತು ಗಾಂಧಿ ಕುಟುಂಬದ ಬಗ್ಗೆ ಶಿವಕುಮಾರ್ ಅವರ ಅಚಲ ನಿಷ್ಠೆಯು, ಬಣಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವ ಮೂಲಕ ಬಿಕ್ಕಟ್ಟಿನಿಂದ ಹೊರಬರಲು ಪಕ್ಷಕ್ಕೆ ಸಾಕಷ್ಟು ಅವಕಾಶವನ್ನು ಒದಗಿಸುತ್ತಿದೆ. ಪ್ರಸ್ತುತ, ಪರಿಸ್ಥಿತಿಗಳು ಸಿದ್ದರಾಮಯ್ಯ ಅವರಿಗೆ ಅನುಕೂಲಕರವಾಗಿರುವಂತೆ ತೋರುತ್ತಿದೆ.
ರಾಜಕೀಯ ಸಮೀಕರಣಗಳು ಯಾವಾಗ ಬೇಕಾದರೂ ಬದಲಾಗಬಹುದು. ರಾಜಕೀಯದಲ್ಲಿ ಯಾವುದೂ ಖಚಿತವಲ್ಲ. ಸಮಯ ಏನನ್ನಾದರೂ ಬದಲಾಯಿಸಬಹುದು.
Advertisement