
ಗದಗ: ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎನ್ನುವದು ತಪ್ಪು ಕಲ್ಪನೆ, ರಾಜ್ಯ ಸರ್ಕಾರ ಜನರಿಗೆ ಗ್ಯಾರಂಟಿ ಯೋಜನೆಗಳನ್ನು ಕೊಟ್ಟು, ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಗದಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ರಾಯರೆಡ್ಡಿ ಅವರು ಸಲಹೆ ಕೊಡುತ್ತಾರೆ. ಆದ್ರೆ, ಜನರಿಗೆ ಗ್ಯಾರಂಟಿ ಯೋಜನೆ ಕೊಟ್ಟು, ಅಭಿವೃದ್ಧಿ ಕಾರ್ಯಗಳನ್ನು ನಾವು ಮಾಡುತ್ತಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಮುಂಡರಗಿಯಲ್ಲಿ ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಕನಕ ಸಮುದಾಯ ಭವನ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೆ, ಎಲ್ಲಾ ಕ್ಷೇತ್ರಗಳಿಗೆ ಸಿಎಂ ತಲಾ 50 ಕೋಟಿ ರೂ. ಹಾಗೂ ಬೆಂಗಳೂರಿಗೆ 2 ಸಾವಿರ ಕೋಟಿ ರೂ. ಅನುದಾನ ಮೀಸಲಿಟ್ಟಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎನ್ನುವದು ತಪ್ಪು ಕಲ್ಪನೆ ಎಂದಿದ್ದಾರೆ.
5 ವರ್ಷಗಳ ಕಾಲ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ ಎಂದು ಸ್ವತಃ ಸಿಎಂ ಹಾಗೂ ಪಕ್ಷದ ಎಲ್ಲರೂ ಹೇಳಿದ್ದಾರೆ. ಬಿಜೆಪಿ ಅವಧಿಯಲ್ಲಿ ಎಷ್ಟು ಅನುದಾನ ಸಿಗುತ್ತಿತ್ತು ಎನ್ನುವುದನ್ನು ನೋಡಿ ಹೇಳಿದ್ದಾರೆ. ಬಿಜೆಪಿಗೆ ಹೋಲಿಸಿದರೆ ಅಭಿವೃದ್ಧಿ ಕೆಲಸ ಚೆನ್ನಾಗಿಯೇ ಆಗುತ್ತಿವೆ. ಈಗಾಗಲೇ 25 ಕೋಟಿ ರೂ. ಅನುದಾನವನ್ನು ಎಲ್ಲಾ ಕ್ಷೇತ್ರಕ್ಕೂ ಕೊಟ್ಟಿದಾರೆ. ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಯಾವ ಕಾರ್ಯಗಳೂ ನಿಂತಿಲ್ಲ ತಿರುಗೇಟು ನೀಡಿದ್ದಾರೆ.
ಸಿಎಂ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ಸಿಎಂ ಬದಲಾವಣೆ ವರಿಷ್ಠರಿಗೆ ಬಿಟ್ಟಿದ್ದು. ಹೈಕಮಾಂಡ್ ಸಿಎಂ ಬದಲಾವಣೆಗೆ ಸೂಚನೆ ಕೊಟ್ಟಿಲ್ಲ. ಸಣ್ಣ-ಪುಟ್ಟ ಭಿನ್ನಾಭಿಪ್ರಾಯದಿಂದ ಕೆಲ ಶಾಸಕರು ಮಾತಾಡಿರಬಹುದು. ಅದು ಅವರ ವೈಯಕ್ತಿಕ ವಿಚಾರ. ಅದರ ಅರ್ಥ ಸರ್ಕಾರ ಅಸ್ಥಿರವಾಗಿದೆ ಅಂತಲ್ಲ. ಸುರ್ಜೇವಾಲ ಅವರೇ ಸಿಎಂ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ. ಹಾಗಾಗಿ 5 ವರ್ಷಗಳ ಕಾಲವೂ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದಿದ್ದಾರೆ.
ಬಡ್ತಿ ನೀಡಿ ಸಿಎಂ ಕುರ್ಚಿ ಕಸಿಯುವ ಪ್ಲ್ಯಾನ್ ಎಂಬ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ತಂದೆ ಸಿದ್ದರಾಮಯ್ಯ ಅವರು ತಮ್ಮ ಇಡೀ ರಾಜಕೀಯ ಜೀವನ ಅಹಿಂದ ಪರ ಹೋರಾಟ ಮಾಡಿದ್ದಾರೆ. ಅವರನ್ನು ಸದಸ್ಯರನ್ನಾಗಿ ಮಾಡಿದರೆ ಮೌಲ್ಯಯುತ ಕೊಡುಗೆ ನೀಡಲು ಸಾಧ್ಯ ಎಂದು ಹೇಳಿ ಆ ಸಮಿತಿ ಸದಸ್ಯರನ್ನಾಗಿ ಮಾಡಿದ್ದಾರೆ’ ಎಂದರು.
Advertisement