
ಬೆಂಗಳೂರು: ಪಕ್ಷದ ಕಾರ್ಯಕರ್ತರು, ಸಾರ್ವಜನಿಕರ ಮತ್ತು ಧಾರ್ಮಿಕ ಮುಖಂಡರು ಕೆಲವು ನಾಯಕರಿಗೆ ಬೆಂಬಲ ವ್ಯಕ್ತಪಡಿಸುವುದು ಸಹಜ. ಅದನ್ನು ತಪ್ಪು ಎಂದು ಹೇಳಲಾಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ,ಕೆ ಶಿವಕುಮಾರ್ ಅವರು ಭಾನುವಾರ ಹೇಳಿದರು.
ಶಿವಕುಮಾರ್ ಅವರಿಗೆ ಉನ್ನತ ಸ್ಥಾನ ಸಿಗಬೇಕು ಎಂಬ ಆಶಯ ವ್ಯಕ್ತಪಡಿಸಿದ ಬಾಳೆಹೊನ್ನೂರಿನ ರಂಭಾಪುರಿ ಮಠದ ವೀರ ಸೋಮೇಶ್ವರ ಸ್ವಾಮೀಜಿ ಹೇಳಿಕೆ ಕುರಿತು ತಾಲ್ಲೂಕಿನ ಕೋಡಿಹಳ್ಳಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಲಿ ಎಂದು ಜನ ಮತ್ತು ಸ್ವಾಮೀಜಿಗಳು ಬಯಸುತ್ತಾರೆ. ಅದನ್ನು ತಪ್ಪು ಎಂದು ಹೇಳಲಾಗುವುದಿಲ್ಲ. ಪಕ್ಷ ಕಟ್ಟಿರುವ ನಾವೆಲ್ಲರೂ ಪಕ್ಷದ ಶಿಸ್ತಿನ ಸಿಪಾಯಿಗಳು. ಪಕ್ಷ ಏನು ಹೇಳುತ್ತದೆಯೋ ಅದನ್ನ ಕೇಳಿಕೊಂಡು ಹೋಗುತ್ತೇವೆಂದು ಎಂದು ಹೇಳಿದರು.
ಕೆಲವರು ಚಪಲಕ್ಕೆ ಮಾತನಾಡುತ್ತಾರೆ. ಅದರ ಅವಶ್ಯಕತೆ ಇಲ್ಲ. ಮುಖ್ಯಮಂತ್ರಿ ಬದಲಾವಣೆ ವಿಚಾರ ಕುರಿತು ಯಾರೂ ಮಾತನಾಡಬಾರದು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈಗಾಗಲೇ ಹೇಳಿದ್ದಾರೆ. ಪಕ್ಷ ಹೇಳಿದ್ದನ್ನು ಕೇಳಿಕೊಂಡು ಹೋಗುತ್ತೇವೆ. ಜನರ ಭಾವನೆಯಂತೆ ಕೆಲಸ ಮಾಡಬೇಕು ಎಂದು ತಿಳಿಸಿದರು.
ಒಡಂಬಡಿಕೆಯಂತೆ ಅಧಿಕಾರ ನೀಡಬೇಕು ಎಂದು ಸ್ವಾಮೀಜಿ ಒತ್ತಾಯಿಸಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಅದನ್ನು ಸಾರ್ವಜನಿಕವಾಗಿ ಯಾಕೆ ಮಾತನಾಡಲಿ ನಾನುಂಟು, ಪಕ್ಷ ಉಂಟು. ನಾವೆಲ್ಲ ಒಟ್ಟಿಗೆ ಕೆಲಸ ಮಾಡುತ್ತೇವೆ ಎಂದರು.
Advertisement