
ತುಮಕೂರು: ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ರಾಜ್ಯಕ್ಕೆ ಆಗಮಿಸಿ ಶಾಸಕರ ಅಭಿಪ್ರಾಯ ಸಂಗ್ರಹಿಸುವ ಪ್ರಕ್ರಿಯೆಗೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಟರಾಜನ್ ಅವರು ಆಂಧ್ರಪ್ರದೇಶಕ್ಕೆ ಭೇಟಿ ನೀಡಿದ್ದರು. ಅವರು ಅಲ್ಲಿ ಒಂದೇ ದಿನಕ್ಕೆ ವಾಪಸ್ ಹೋಗಿದ್ದಾರೆ. ಆದರೆ ರಾಜ್ಯದಲ್ಲಿ ಏನಾಗಿದೆ ನೋಡಿ’ ಎಂದು ಪ್ರಶ್ನಿಸಿದರು. ಸುರ್ಜೇವಾಲ ರಾಜ್ಯಕ್ಕೆ ಭೇಟಿನೀಡಿ ಅಭಿಪ್ರಾಯ ಸಂಗ್ರಹಿಸಿರುವುದು ತರವಲ್ಲ. ಅವರು ಬಂದು ನಡೆಸಿದ ಪ್ರಕ್ರಿಯೆ ಬಗ್ಗೆ ನನಗೆ ಸಮಾಧಾನವಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿಲ್ಲ. ಅವರ (ಸಿದ್ದರಾಮಯ್ಯ) ನೇತೃತ್ವದಲ್ಲೇ ಮುಂದಿನ ಚುನಾವಣೆ ನಡೆಯಲಿದೆ ಎಂದರು. ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯನವರೇ ಆಶಯ ವ್ಯಕ್ತಪಡಿಸಿದಂತೆ, ಅದೇ ಆಶಯವನ್ನೂ ನಾನು ಹೊಂದಿದ್ದೇನೆ. ಸಿಎಂ ಬದಲಾವಣೆ ಆಗಬೇಕು ಅಂದರೆ ಹೈಕಮಾಂಡ್ ಮಾಡಬೇಕು, ಇಲ್ಲ ಶಾಸಕರು ಮಾಡಬೇಕು. ಆದರೆ ಬದಲಾವಣೆ ಯಾರಿಗೂ ಇಷ್ಟವಿಲ್ಲ ಎಂದರು.
ಎಐಸಿಸಿ ರಚಿಸಿರುವ ಒಬಿಸಿ ಸಲಹಾ ಮಂಡಳಿ ನಾಯಕತ್ವವನ್ನು ಸಿದ್ದರಾಮಯ್ಯ ಒಪ್ಪಿಕೊಳ್ಳುವುದು ಅನುಮಾನ. ಅವರಿಗೆ ಹಿಂದಿ ಬರುವುದಿಲ್ಲ. ರಾಷ್ಟ್ರ ಮಟ್ಟಕ್ಕೆ ಹೋಗಿ ಏನು ಮಾಡುತ್ತಾರೆ. ದೆಹಲಿಯಲ್ಲಿ ಹಿಂದಿ ಬರದಿದ್ದರೆ ಏನೂ ನಡೆಯುವುದಿಲ್ಲ ಎಂದು ತಿಳಿಸಿದರು.
Advertisement