
ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್ ಅವರು ದೆಹಲಿಯಲ್ಲಿ ಗುರುವಾರ ಎಐಸಿಸಿ ಅಧ್ಯ ಕ್ಷಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಲೋಕಸಭೆ ವಿರೋಧ ಪಕ್ಷಧ ನಾಯಕ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಲು ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ ಅವರು ಉದ್ದೇಶಿಸಿದ್ದರು. ಆದರೆ, ರಾಹುಲ್ ಗಾಂಧಿ ಸಮಯ ನೀಡದ ಕಾರಣ ಸುರ್ಜೇವಾಲಾ ಹಾಗೂ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿದರು.
ರಾಹುಲ್ ಅವರು ಬುಧವಾರ ಪಾಟ್ನಾಕ್ಕೆ ತೆರಳಿದ್ದರು. ಗುರುವಾರ ನವದೆಹಲಿಯಲ್ಲೇ ಇದ್ದರು. ಪಕ್ಷ ಸಂಘಟನೆ ಸಂಬಂಧ ಗುಜರಾತ್‌ನ ನಾಯಕರೊಂದಿಗೆ ಸಭೆ ನಡೆಸಿದರು.
ರಾಹುಲ್ ಕಚೇರಿಯಿಂದ ಕರೆ ಬರಬಹುದು ಎಂದು ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ ಅವರು ಸಂಜೆಯ ವರೆಗೆ ಕಾದರು. ಆದರೆ, ಸಮಯ ನೀಡದ ಕಾರಣ ಸುರ್ಜೇವಾಲಾ ಹಾಗೂ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿದರು,
ಮಾತುಕತೆ ವೇಳೆ ನಾಯಕರು ಈ ವೇಳೆ ವಿವಿಧ ನಿಗಮಗಳು, ಮಂಡಳಿಗಳ ಅಧ್ಯಕ್ಷರ ನೇಮಕ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದು, ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆಂದು ತಿಳಿದುಬಂದಿದೆ.
ಆದರೆ, ಸುರ್ಜೇವಾಲಾ ಮತ್ತು ಖರ್ಗೆ ಅವರನ್ನು ಭೇಟಿಯಾಗಿ ಹೊರಬಂದ ಬಳಿಕ ಸಿಎಂ ಆಗಲಿ, ಡಿಸಿಎಂ ಆಗಲಿ ಮಾಧ್ಯಮದವರೊಂದಿಗೆ ಯಾವುದೇ ಪ್ರತಿಕ್ರಿಯೆಗಳನ್ನು ನೀಡಲಿಲ್ಲ.
ನಿಗಮ-ಮಂಡಳಿ ಆಕಾಂಕ್ಷಿಗಳ ಪಟ್ಟಿ ಚರ್ಚೆ ಪೂರ್ಣಗೊಂಡಿದ್ದು, ಅಂತಿಮ ತೀರ್ಮಾನ ಬಾಕಿ ಇದೆ. ಮುಂದಿನ ವಾರ ಸುರ್ಜೇವಾಲಾ ಬೆಂಗಳೂರಿಗೆ ಬಂದಾಗ ಪಟ್ಟಿ ಅಂತಿಮಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಒಂದು ಗಂಟೆ ಕಾಲ ನಡೆದ ಸಭೆಯಲ್ಲಿ, ನಿಗಮ-ಮಂಡಳಿಗಳಿಗೆ ಶಾಸಕರು ಸೇರಿದಂತೆ ಪಕ್ಷದ ಕಾರ್ಯಕರ್ತರ ನೇಮಕ ಮಾಡುವ ಪಟ್ಟಿಗೆ ನಾಯಕರು ಅನುಮೋದನೆ ನೀಡಿದ್ದಾರೆಂದು ತಿಳಿದುಬಂದಿದೆ.
ಮಾತುಕತೆ ವೇಳೆ ನಾಯಕರು ನಾಯಕತ್ವ ಬದಲಾವಣೆ ವಿಚಾರ ಕುರಿತು ಚರ್ಚೆ ನಡೆಸಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ನಾಯಕತ್ವ ವಿಚಾರ ಜಟಿಲವಾಗಿದ್ದು, ಇದೀಗ ತೆಗೆದುಕೊಳ್ಳುವ ಯಾವುದೇ ನಿರ್ಧಾರ ಮುಂಬರುವ ಚುನಾವಣೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಬಲ್ಲ ಮೂಲಗಳು ಮಾಹಿತಿ ನೀಡಿವೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎಂಎಲ್‌ಸಿಗಳಾಗಿ ನಾಮನಿರ್ದೇಶನಗೊಳ್ಳಲು ನಾಲ್ವರ ಹೆಸರನ್ನು (ಆರತಿ ಕೃಷ್ಣ, ರಮೇಶ್ ಬಾಬು, ಡಿಜಿ ಸಾಗರ್ ಮತ್ತು ದಿನೇಶ್ ಅಮೀನ್ ಮಟ್ಟು) ಪ್ರಸ್ತಾಪಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಇನ್ನು ಮಲ್ಲಿಕಾರ್ಜುನ ಖರ್ಗೆಯವರೊಂದಿಗೆ ಸಿದ್ದರಾಮಯ್ಯ ಅವರು ಏಕಾಂಗಿಯಾಗಿ ಮಾತುಕತೆ ನಡೆಸಿದ್ದು, ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ವಿವರಿಸಿದ್ದಾರೆಂದು ಮೂಲಗಳು ತಿಳಿಸಿವೆ.
Advertisement