
ಚಿಕ್ಕಬಳ್ಳಾಪುರ: ರಾಜ್ಯದ ಗ್ಯಾರಂಟಿ ಸರ್ಕಾರಕ್ಕೆ ಅಭಿವೃದ್ಧಿ ಬಗ್ಗೆ ಚಿಂತೆ ಇಲ್ಲ, ಬರೀ "ಕುರ್ಚಿ" ಬಗ್ಗೆ ಚಿಂತೆಯಾಗಿದೆ. ಮಾತೆತ್ತಿದರೆ ದೆಹಲಿಗೆ ಹೋಗಿ ಕುಳಿತುಕೊಳ್ಳತ್ತಾರೆಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರು ಕಾಂಗ್ರೆಸ್ ವಿರುದ್ಧ ಭಾನುವಾರ ವಾಗ್ದಾಳಿ ನಡೆಸಿದರು.
ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿ ನಡೆದ ಜೆಡಿಎಸ್ ಸದಸ್ಯತ್ವ ಅಭಿಯಾನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಜನರ ತುರ್ತು ಅಗತ್ಯಗಳನ್ನು ನಿರ್ಲಕ್ಷಿಸಿ "ಕುರ್ಚಿ" ಹೋರಾಟದಲ್ಲಿ ನಿರತವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಒಬ್ಬರು ಮುಖ್ಯಮಂತ್ರಿ ಕುರ್ಚಿಯಲ್ಲಿ ಉಳಿಸಿಕೊಳ್ಳು ಶತಾಯಗತಾಯ ಯತ್ನ ನಡೆಸುತ್ತಿದ್ದರೆ, ಮತ್ತೊಬ್ಬರು ಕುರ್ಚಿ ಪಡೆಯಲು ಚಡಪಡಿಸುತ್ತಿದ್ದಾರೆಂದು ವ್ಯಂಗ್ಯವಾಡಿದರು.
ಜೆಡಿಎಸ್ ಪಕ್ಷದ ಯಾವುದೇ ಶಾಸಕರು ಹಣ ಅಥವಾ ಅಧಿಕಾರಕ್ಕಾಗಿ ತಮ್ಮನ್ನು ತಾವು ಮಾರಿಕೊಳ್ಳುವುದಿಲ್ಲ. ಪ್ರಸ್ತುತ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ "ರಾಜ್ಯದ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಸರ್ಕಾರಗಳಲ್ಲಿ ಒಂದಾಗಿದೆ. ರಾಜ್ಯದ ಜನತೆ ಭ್ರಮನಿರಸನಗೊಂಡಿದ್ದಾರೆ. ನಾನು ಹೋದಲ್ಲೆಲ್ಲಾ ಗ್ರಾಮಸ್ಥರು ಇಂತಹ ಕಳಪೆ ಆಡಳಿತವನ್ನು ಎಂದಿಗೂ ನೋಡಿಲ್ಲ ಎಂದು ಹೇಳುತ್ತಾರೆ, ಈಡೇರಿಸದ ಚುನಾವಣಾ ಭರವಸೆಗಳನ್ನು ಕಾಂಗ್ರೆಸ್ ನೀಡಿದೆ. ಮತದಾರರನ್ನು ದಾರಿ ತಪ್ಪಿಸಿದೆ. ಐದು ಗ್ಯಾರಂಟಿ ಯೋಜನೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಇದೇ ವೇಳೆ ಉಪಮುಖ್ಯಮಂತ್ರಿ ಡಿಕೆ. ಶಿವಕುಮಾರ್ ಅವರನ್ನು ಟೀಕಿಸಿದ ನಿಖಿಲ್ ಅವರು, ಪ್ರಚಾರದ ಸಮಯದಲ್ಲಿ ಜನರಿಂದ ಪೆನ್ನು ಮತ್ತು ಪೇಪರ್ ಕೇಳಿದ್ದರು. ಜನರು ಕೊಟ್ಟಿದ್ದರು. ಆದರೆ, ಈಗ ತಮ್ಮ ಭರವಸೆಗಳನ್ನು ಈಡೇರಿಸುತ್ತಿಲ್ಲ ಎಂದು ಟೀಕಿಸಿದರು.
ಗೃಹಲಕ್ಷ್ಮಿ ಯೋಜನೆಯ ಕುರಿತು ಮಾತನಾಡಿ, ಕಾಂಗ್ರೆಸ್ ಸರ್ಕಾರ ಆರಂಭದಲ್ಲಿ ಮಹಿಳೆಯರಿಗೆ ಮಾಸಿಕ ಪಾವತಿಗಳನ್ನು ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಈಗ "ಸಾಧ್ಯವಾದಾಗ" ಪಾವತಿಸಲಾಗುವುದು ಎಂದು ಹೇಳುತ್ತಿದ್ದಾರೆ. ಮಾಸಿಕ ಹಣ ನೀಡುತ್ತೇವೆಂದು ಹೇಳಿರಲಿಲ್ಲವೇ ಎಂದು ಪ್ರಶ್ನಿಸಿದರು.
Advertisement