
ಹುಬ್ಬಳ್ಳಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಪ್ರಧಾನಮಂತ್ರಿ ಹುದ್ದೆಯನ್ನು ತ್ಯಾಗ ಮಾಡಬಹುದು ಎಂದು ಶಾಸಕ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ಸೋಮವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರು ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ವ್ಯಂಗ್ಯವಾಗಿ ಮಾತನಾಡುತ್ತಾರೆ. ಹಾಗಾಗಿ, ಇದು ನಿಜ ಆಗಲೂಬಹುದು ಎಂದು ನಾನು ಕಾರಣವನ್ನು ಕೊಟ್ಟೆ, ಸುಮ್ಮ ಸುಮ್ಮನೆ ನಾನು ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಯಾಗಲಿ ಎಂದು ವಿಶ್ ಮಾಡಲಿಲ್ಲ ಎಂದು ಹೇಳಿದರು.
ಖರ್ಗೆ ಅವರನ್ನು ದಲಿತ ಪ್ರಧಾನಿ ಎಂದು ಘೋಷಿಸಲಿ. ಅವರನ್ನು ಕಾಂಗ್ರೆಸ್ನವರು ಪ್ರಧಾನಿಯನ್ನಾಗಿ ಮಾಡ್ತಾರಾ? ಎಂದು ಬಿಜೆಪಿಗರು ಹಗುರವಾಗಿ ಮಾತನಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಹಿರಿಯ ರಾಜಕೀಯ ನಾಯಕರಿದ್ದಾರೆ. ಅವರಿಗೆ ಯಾರನ್ನೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ಬಿಜೆಪಿಯವರು ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಿ ಎನ್ನುತ್ತಿದ್ದಾರೆ. ಹೇಳುವುದು ಬೇಕಿಲ್ಲ, ಅವರೇ ಪ್ರಧಾನಿಯಾದರೂ ಆಗಬಹುದು ಎಂದರು.
ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗುತ್ತಾರೆಂದು ನಾನು ಭವಿಷ್ಯ ನುಡಿದಿದ್ದೆ. ಕೆಲವೇ ತಿಂಗಳಲ್ಲಿಯೇ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದರು. ಕೆಲವೇ ತಿಂಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ 75 ವರ್ಷ ಆಗುತ್ತೆ, ಆರ್.ಎಸ್.ಎಸ್ ಹೇಳಿದಂತೆ ಮೋದಿ ಕೆಳಗಿಳಿದರೆ ಅವರು ಅಧಿಕಾರದಿಂದ ನಿರ್ಗಮಿಸಬಹುದು. ಸದ್ಯ ಕೇಂದ್ರದಲ್ಲಿ ಬಿಜೆಪಿಗೆ ಬಹುಮತವಿಲ್ಲ. ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಬೆಂಬಲ ಹಿಂಪಡೆದರೆ ಕೇಂದ್ರ ಸರ್ಕಾರ ಪತನವಾಗಬಹುದು. ಆಗ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಅವಕಾಶಗಳು ದಟ್ಟವಾಗಲಿವೆ.
ರಾಹುಲ್ ಗಾಂಧಿಗೆ ಪ್ರಧಾನಿಯಾಗಲು ಮೊದಲ ಅವಕಾಶವಿದೆ. ಆದರೆ, ಮಲ್ಲಿಕಾರ್ಜುನ ಖರ್ಗೆ ಅವರಿಗಾಗಿ ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಬಹುದು. ಖರ್ಗೆ ಪ್ರಧಾನಮಂತ್ರಿ ಆದರೂ ಅಚ್ಚರಿಯಿಲ್ಲ. ಇದು ನನ್ನ ನಿಲುವಾಗಿದೆ ಎಂದು ತಿಳಿಸಿದರು.
ಇದೇ ವೇಳೆ ರಾಜ್ಯ ನಾಯಕತ್ವ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಸಿದ್ದರಾಮಯ್ಯ ಅವರು ಇನ್ನೂ ಎರಡು ವರ್ಷ 10 ತಿಂಗಳು ಮುಖ್ಯಮಂತ್ರಿ ಆಗಿಯೇ ಇರುತ್ತಾರೆ ಎಂದು ಸ್ಪಷ್ಟಪಡಿಸಿದರು.
Advertisement