
ಬೆಂಗಳೂರು: ರಾಜ್ಯದಲ್ಲಿ 'ಯೂರಿಯಾ' ರಸಗೊಬ್ಬರ ಅಭಾವ ಉಂಟಾಗಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಸಾನ್ ಮೋರ್ಚಾ ಇಂದಿನಿಂದ ಒಂದು ವಾರದ ಪ್ರತಿಭಟನೆಯನ್ನು ಆರಂಭಿಸಿದೆ. ದಾವಣಗೆರೆ, ಕೊಪ್ಪಳ, ಧಾರವಾಡದಲ್ಲಿ ಪ್ರತಿಭಟನೆ ನಡೆಸಿದ ಪಕ್ಷದ ರೈತರು, ರಾಜ್ಯ ಸರ್ಕಾರ ರೈತರಿಗೆ ಸಮರ್ಪಕವಾಗಿ ಯೂರಿಯಾವನ್ನು ಪೂರೈಸಬೇಕು ಎಂದು ಒತ್ತಾಯಿಸಿದರು.
ದಾವಣಗೆರೆಯಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಬಳಿಕ ಪೊಲೀಸರು ರೇಣುಕಾಚಾರ್ಯ ಮತ್ತಿತರನ್ನು ಬಂಧಿಸಿ ವಾಹನದಲ್ಲಿ ಕರೆದೊಯ್ದರು. ರಾಜ್ಯದ ವಿವಿಧೆಡೆ ಇದೇ ರೀತಿಯ ಪ್ರತಿಭಟನೆ ನಡೆಯಿತು ಎಂದು ಪಕ್ಷದ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಅಸಮರ್ಪಕ ನಿರ್ವಹಣೆಯೂ ರೈತರಲ್ಲಿ ಆತಂಕ ಮೂಡಿಸಿರುವುದರಿಂದ ರಾಜ್ಯದ ವಿವಿಧೆಡೆ ಯೂರಿಯಾದ ಕೃತಕ ಅಭಾವ ಸೃಷ್ಟಿಯಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಭಾನುವಾರ ಆರೋಪಿಸಿದ್ದರು.
ಯೂರಿಯಾ ಅಭಾವದ ವಿರುದ್ಧ ರೈತರ ಪ್ರತಿಭಟನೆ ವರದಿ ಉಲ್ಲೇಖಿಸಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ವಿಪಕ್ಷ ನಾಯಕ ಆರ್.ಅಶೋಕ್, ಈ ಬಾರಿ ಒಂದು ತಿಂಗಳಿಗೂ ಮುಂಚಿತವಾಗಿ ಮುಂಗಾರು ಆಗಮಿಸಿದ್ದು, ರೈತರಿಗೆ ಅಗತ್ಯ ಪ್ರಮಾಣದ ರಸಗೊಬ್ಬರ ವಿತರಿಸಲು ಸರ್ಕಾರ ಗಮನ ಹರಿಸಬೇಕು ಮತ್ತು ಸೂಕ್ತ ಸಮಯಕ್ಕೆ ಪೂರೈಸಬೇಕು ಎಂದು ಒತ್ತಾಯಿಸಿದ್ದಾರೆ.
Advertisement