
ಮಂಡ್ಯ: ರಾಜ್ಯದಲ್ಲಿ ಬಿಜೆಪಿ ಯೂರಿಯಾ ಕೊರತೆ ಬಗ್ಗೆ "ತಪ್ಪು ಮಾಹಿತಿ" ನೀಡುತ್ತಿದೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇದಕ್ಕೆ ಕೇಂದ್ರದಲ್ಲಿರುವ ಕೇಸರಿ ಪಕ್ಷದ ಸರ್ಕಾರವೇ ಕಾರಣ ಎಂದು ಸೋಮವಾರ ಆರೋಪಿಸಿದರು.
ರಾಜ್ಯಕ್ಕೆ ರಸಗೊಬ್ಬರವನ್ನು ತಕ್ಷಣವೇ ಪೂರೈಸುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದನ್ನು ಉಲ್ಲೇಖಿಸಿದ ಸಿಎಂ ಸಿದ್ದಾರಮಯ್ಯ ಅವರು, ಪ್ರತಿಭಟನೆ ನಡೆಸುವ ಬದಲು ಕೇಂದ್ರ ಸಚಿವರೊಂದಿಗೆ ಮಾತನಾಡಿ ರಾಜ್ಯಕ್ಕೆ ಬರಬೇಕಾದ ರಸಗೊಬ್ಬರ ಬಿಡುಗಡೆ ಮಾಡಿಸಲಿ ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.
ಇಂದು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ 87 ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಪ್ರತಿಪಾದಿಸಿದರು.
ಯೂರಿಯಾ ಕೊರತೆ ಬಗ್ಗೆ ಬಿಜೆಪಿ ತಪ್ಪು ಮಾಹಿತಿ ನೀಡುತ್ತಿದೆ... ರಸಗೊಬ್ಬರ ಕೊರತೆಯಿಲ್ಲ, ಆದರೆ ಕೇಂದ್ರ ಸರ್ಕಾರವು ಅಗತ್ಯ ಪ್ರಮಾಣದ ರಸಗೊಬ್ಬರ ಪೂರೈಸುತ್ತಿಲ್ಲ" ಎಂದು ಸಿದ್ದರಾಮಯ್ಯ ಹೇಳಿದರು.
ಕೇಂದ್ರವು ರಾಜ್ಯಕ್ಕೆ 6,80,655 ಮೆಟ್ರಿಕ್ ಟನ್ ಯೂರಿಯಾವನ್ನು ಪೂರೈಸಬೇಕಿತ್ತು. ಆದರೆ ಅವರು ಕೇವಲ 5,16,959 ಮೆಟ್ರಿಕ್ ಟನ್ ಮಾತ್ರ ಪೂರೈಸಿದ್ದಾರೆ ಎಂದು ಸಿಎಂ ತಿಳಿಸಿದರು.
"ನಾನು ಈ ಸಂಬಂಧ ಕೇಂದ್ರಕ್ಕೆ ಪತ್ರ ಬರೆದಿದ್ದೇನೆ. ಈ ಬಾರಿ ಮುಂಗಾರು ಮೊದಲೇ ಆರಂಭವಾಗಿದೆ. ರೈತರು ಬಿತ್ತನೆ ಪ್ರದೇಶವನ್ನು ಹೆಚ್ಚಿಸಿದ್ದಾರೆ. ಇದಕ್ಕಾಗಿ ರಸಗೊಬ್ಬರ ಅಗತ್ಯವಿದೆ ಮತ್ತು ನಾನು ಕೇಂದ್ರ ಯೂರಿಯಾ ಪೂರೈಸುವಂತೆ ಒತ್ತಾಯಿಸಿದ್ದೇನೆ" ಎಂದರು.
ರಾಜ್ಯ ಸರ್ಕಾರ ಯೂರಿಯಾದ "ಕೃತಕ ಅಭಾವ ಸೃಷ್ಟಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಿಸಾನ್ ಮೋರ್ಚಾ ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತು. ಅಲ್ಲದೆ ದಲ್ಲಾಳಿಗಳು ಮತ್ತು ವ್ಯಾಪಾರಿಗಳು ದಾಸ್ತಾನುಗಳನ್ನು ಹಿಡಿದಿಟ್ಟುಕೊಂಡಿದ್ದಾರೆ ಎಂದು ಪ್ರತಿಪಕ್ಷ ಆರೋಪಿಸಿದೆ.
Advertisement