
ಬೆಂಗಳೂರು: ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳಲು ಮಲ್ಲಿಕಾರ್ಜುನ ಖರ್ಗೆ ಪ್ರಯತ್ನಪಡುತ್ತಿದ್ದು, ಸರಿಯಾದ ಸಮಯಕ್ಕೆ ಕಲ್ಲು ಹೊಡೆದಿದ್ದಾರೆಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಸೋಮವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1999ರಲ್ಲಿ ಸಿಎಂ ಸ್ಥಾನ ಕೈತಪ್ಪಿದ್ದಕ್ಕೆ ಖರ್ಗೆ ಬೇಸರ ವ್ಯಕ್ತಪಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದರು.
ಖರ್ಗೆ ಸರಿಯಾದ ಸಮಯಕ್ಕೆ ಕಲ್ಲು ಹೊಡೆದಿದ್ದಾರೆ. ಸಿಎಂ ಕುರ್ಚಿಯಲ್ಲಿ ಖರ್ಗೆ ಕುಳಿತುಕೊಳ್ಳಲು ಪ್ರಯತ್ನಪಡುತ್ತಿದ್ದಾರೆ. ಎಸ್.ಎಂ. ಕೃಷ್ಣ ಅವರು ಸತ್ತ ಮೇಲೆ ಅವರ ಹೆಸರು ಹೇಳುತ್ತಾರೆ. ಎಸ್.ಎಂ. ಕೃಷ್ಣ ಸತ್ತ ಮೇಲೆ ಖರ್ಗೆ ಟೀಕೆ ಮಾಡುತ್ತಿದ್ದಾರೆ. ಈ ಮೂಲಕ ಕೃಷ್ಣಗೆ ಅಪಮಾನ ಮಾಡುತ್ತಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಇಲ್ಲದಿದ್ದರೆ ಖರ್ಗೆ ಸಹಜವಾಗಿ ಸಿಎಂ ಆಗುತ್ತಿದ್ದರು. ಈಗ ಖರ್ಗೆ ಸರಿಯಾದ ಸಮಯಕ್ಕೆ ಕಲ್ಲು ಹೊಡೆದಿದ್ದಾರೆ. ಅಕ್ಟೋಬರ್‌ನಲ್ಲಿ ಸಿಎಂ ಬದಲಾವಣೆ ಆಗೋದು ನಿಜ. ಸಿಎಂ ಸ್ಥಾನಕ್ಕಾಗಿ ವರ ಕೊಡುವ ದೇವರ ಬಳಿ ಡಿಕೆಶಿ ಹೋಗುತ್ತಿದ್ದಾರೆ. ಡಿಕೆಗೆ ಕಂಟಕ ಇರೋದು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಹೋದವರಿಂದ ಎಂದು ತಿಳಿಸಿದರು.
ಇದೇ ವೇಳೆ ಮೈಸೂರಿನಲ್ಲಿ ಮಾದಕ ದ್ರವ್ಯಗಳ ತಯಾರಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮೈಸೂರಿನ ರಿಂಗ್ ರಸ್ತೆ ಬಳಿ ಡ್ರಗ್ಸ್ ಮಾಫಿಯ ತಲೆ ಎತ್ತಿದೆ. ಆ ಜಾಗ ಕೊಟ್ಟವರು ಯಾರು? ಅಲ್ಲಿ ನಡೆಸುತ್ತಿದ್ದ ಗ್ಯಾರೇಜ್ ಯಾರದ್ದು? ಸಿಎಂ ತವರಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ಏನು ಮಾಡುತ್ತಾ ಇದ್ದರು ಎಂದು ಪ್ರಶ್ನಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್‌ಗಿಂತ ನಮ್ಮಪ್ಪ ಹೆಚ್ಚು ಅಭಿವೃದ್ಧಿ ಮಾಡಿದ್ದಾರೆ ಎಂದು ಯತೀಂದ್ರ ಹೇಳಿ, ಅವರ ಅಪ್ಪನನ್ನು ಹೊಗಳಿದ್ದರು. ಮೈಸೂರಿನಲ್ಲಿ ಡ್ರಗ್ಸ್ ಮಾಫಿಯಾ ಸಿಎಂ ಕೊಡುಗೇನಾ? ಮಹಾರಾಷ್ಟ್ರ ಪೊಲೀಸರು ಮೈಸೂರಿನಲ್ಲಿ ಡ್ರಗ್ಸ್ ಸೀಜ್ ಮಾಡಿದ್ದಾರೆ. ಈ ಸರ್ಕಾರ ಏನು ಕತ್ತೆ ಕಾಯುತ್ತಿದೆಯಾ ಎಂದು ಪ್ರಶ್ನಿಸಿದರು. ಮೈಸೂರಿನಲ್ಲಿ ಡ್ರಗ್ಸ್ ಮಾಫಿಯಾ ತಲೆ ಎತ್ತಿರೋದು ಕೂಡ ಸಿಎಂ ಅವರ ಒಂದು ಸಾಧನೆ ಎಂದು ವ್ಯಂಗ್ಯವಾಡಿದರು.
ಧರ್ಮಸ್ಥಳ ಪ್ರಕರಣದ ತನಿಖೆಯ ಕುರಿತು ಮಾತನಾಡಿ, ಧರ್ಮಸ್ಥಳ ಪ್ರಕರಣದಲ್ಲಿ ಆರೋಪ ಮಾಡುತ್ತಿರುವುದು ಮುಸ್ಲಿಂ. ಇದಕ್ಕೆ ಬೆಂಬಲ ಕೊಡುತ್ತಿರುವುದು ಕೇರಳ ಸರ್ಕಾರ. ಧರ್ಮಸ್ಥಳ ಮಂಜುನಾಥನಿಗೂ ಇದಕ್ಕೂ ಸಂಬಂಧವಿಲ್ಲ. ಇದರ ಹಿಂದೆ ಯಾರೇ ಇದ್ದರೂ ಶಿಕ್ಷೆಯಾಗಲಿ. ಇದೂ ಪಿತೂರಿಯ ಒಂದು ಭಾಗ. ಎಷ್ಟು ಬುರುಡೆಗಳು ಬರುತ್ತವೆ ಗೊತ್ತಾಗಲಿ ಆಮೇಲೆ ಎಲ್ಲವೂ ಗೊತ್ತಾಗುತ್ತದೆ ಎಂದರು.
Advertisement