
ಬೆಂಗಳೂರು: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ವಿರೋಧ ಪಕ್ಷದ ಮುಖ್ಯ ಸಚೇತಕ ಎನ್ ರವಿಕುಮಾರ್ ಅವರ ವಿರುದ್ಧ ಕಾಂಗ್ರೆಸ್ ನಾಯಕರು ಸೋಮವಾರ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ದೂರು ನೀಡಿದ್ದಾರೆ.
ಕಾಂಗ್ರೆಸ್ ಎಂಎಲ್ಸಿಗಳಾದ ಪುಟ್ಟಣ್ಣ, ಸಲೀಂ ಅಹಮ್ಮದ್, ಗೋವಿಂದರಾಜು, ಸುಧಾಮ್ ದಾಸ್, ಶ್ರೀನಿವಾಸ್ ಅವರನ್ನೊಳಗೊಂಡ ಕಾಂಗ್ರೆಸ್ ನಿಯೋಗ ಇಂದು ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿ, ಬಿಜೆಪಿ ಎಂಎಲ್ಸಿಗಳಾದ ಛಲವಾದಿ ನಾರಾಯಣಸ್ವಾಮಿ ಹಾಗೂ ರವಿಕುಮಾರ್ ಅವರ ವಿರುದ್ಧ ದೂರು ನೀಡಿದೆ.
ಎನ್. ರವಿಕುಮಾರ್ ಅವರು ಕಲಬುರಗಿ ಜಿಲ್ಲಾಧಿಕಾರಿಗೆ ಪಾಕಿಸ್ತಾನಿ ಎಂದಿದ್ದಾರೆ. ಛಲವಾದಿ ನಾರಾಯಣಸ್ವಾಮಿ ಅವರು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ನಿಂದಿಸಿದ್ದಾರೆ. ಕೂಡಲೇ ಈ ಇಬ್ಬರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ.
ದೂರು ನೀಡಿದ ಬಳಿಕ ಮಾತನಾಡಿದ ಸಲೀಂ ಅಹ್ಮದ್ ಅವರು, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ರವಿಕುಮಾರ್ ಅವರ ಮಾತುಗಳು ಅಸಂಬದ್ಧವಾಗಿವೆ. ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಲಬುರ್ಗಿ ಜಿಲ್ಲಾಧಿಕಾರಿಗಳ ವಿರುದ್ಧ ಆಡಿದ ಮಾತಿನ ಬಗ್ಗೆ ಕ್ರಮ ಜರುಗಿಸಬೇಕು. ಈ ರೀತಿಯ ಪದ ಬಳಕೆ ಸರಿಯಲ್ಲ. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ನಿಯಮಗಳನ್ನ ಪರಿಶೀಲಿಸಿ ಮುಂದಿನ ಕ್ರಮ
ಕಾಂಗ್ರೆಸ್ ನಾಯಕರು ದೂರು ನೀಡಿದ್ದಾರೆ. ಅದನ್ನು ಸ್ವೀಕರಿಸಿದ್ದೇನೆ. ಸದನದ ನಿಯಮಗಳನ್ನ ಪರಿಶೀಲಿಸಿ ಮುಂದುವರೆಯುತ್ತೇನೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
Advertisement