
ಬೆಂಗಳೂರು: ರಾಜ್ಯ ಸರ್ಕಾರ ಹಿಂದೂಗಳನ್ನು ಗುರಿಯಾಗಿಸಿಕೊಂಡಿದ್ದು, ಹಿಂದೂಗಳ ಗುರಿಯಾಗಿಸಲು ವಿಶೇಷ ಕಾರ್ಯಪಡೆ ರಚಿಸಿದೆ ಎಂದು ಬಿಜೆಪಿ ಕಿಡಿಕಾರಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, "ದಕ್ಷಿಣ ಕನ್ನಡದಲ್ಲಿ ಹಿಂದೂ ನಾಯಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಲು ಕಾರ್ಯಪಡೆ ರಚಿಸಲಾಗಿದೆ ಎಂದು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರ ಹಿಂದೂಗಳ ಗುರಿಯಾಗಿಸಿಕೊಂಡಿದ್ದು, ಹಿಂದೂ ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲು ವಿಶೇಷ ಕಾರ್ಯಪಡೆಯನ್ನೇ ರಚಿಸಿದೆ. ಈ ಕಾರ್ಯಪಡೆ ಕೋಮುವಾದದ ವಿರುದ್ಧವಲ್ಲ, ಹಿಂದೂಗಳ ವಿರುದ್ಧವಾಗಿದೆ ಎಂದು ಹೇಳಿದರು.
ದಕ್ಷಿಣ ಕನ್ನಡದ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದ್ದು, ಆದ್ಯತೆಯ ಮೇರೆಗೆ ಅಧಿಕಾರಿಗಳನ್ನು ನೇಮಿಸಲಾಗಿದೆ. ಈ ಅಧಿಕಾರಿಗಳು ಘಟನೆಗಳು ನಡೆದ ಬಹಳ ಸಮಯದ ನಂತರ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಸುಳ್ಳು ಆರೋಪಗಳನ್ನು ಮಾಡಿ ಹಿಂದೂ ಕಾರ್ಯಕರ್ತರ ವಿರುದ್ಧ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಇದು ಹೀಗೆಯೇ ಮುಂದುವರೆದರೆ ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಇದೇ ವೇಳೆ ಡಿಕೆ.ಶಿವಕುಮಾರ್ ಅವರ ಹೇಳಿಕೆ ಕುರಿತು ಕಿಡಿಕಾರಿದ ಅವರು, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕಾಂಗ್ರೆಸ್ ಪಕ್ಷದಿಂದ ಕರಾವಳಿ ಭಾಗಕ್ಕೆ ಹಣ ಬರುತ್ತಿಲ್ಲ. ಕಾಂಗ್ರೆಸ್‌ನ ಭಿಕ್ಷೆಯಿಂದ ಅಲ್ಲಿನ ಜನರು ಬದುಕುತ್ತಿಲ್ಲ. ಜನರ ಹಣದಲ್ಲೇ ಕಾಂಗ್ರೆಸ್ ನಾಯಕರು ಬದುಕುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಕರಾವಳಿ ಜನರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.
ಕನ್ನಡ ಭಾಷೆ ತಮಿಳಿನಿಂದ ಬಂದಿದೆ ಎಂದ ಕಮಲ್ ಹಾಸನ್ ವಿರುದ್ದವೂ ಕಿಡಿಕಾರಿದ ಅವರು, ಕಮಲ್ ಹಾಸನ್ ಅವರ ಯಾವುದೇ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ನೀಡಬಾರದು. ಕನ್ನಡದ ವಿಚಾರಕ್ಕೆ ಬಂದಾಗ ಎಲ್ಲರೂ ಸ್ಪಷ್ಟವಾಗಿರಬೇಕು. ಕನ್ನಡದ ಎಲ್ಲ ಕಲಾವಿದರು ಕನ್ನಡದ ಪರವಾಗಿ ಮಾತಾಡಬೇಕು ಎಂದು ಒತ್ತಾಯಿಸಿದರು.
ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನಿಯಂತ್ರಣ ತಪ್ಪಿದೆ. ಕೊಲೆಗಳು ಮತ್ತು ಇತರ ಅಪರಾಧಗಳು ಹೆಚ್ಚಾಗಿವೆ. ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದರು.
ಮಂಗಳೂರಿನಲ್ಲಿ, ಮುಸ್ಲಿಂ ಸಂಘಟನೆಗಳು ಮತ್ತು ನಾಯಕರು ರಾಜ್ಯ ಸರ್ಕಾರವನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ, ಹೀಗಾಗಿ, ಅವರ ಒತ್ತಡಕ್ಕೆ ಮಣಿದು ಹಿಂದೂ ಕಾರ್ಯಕರ್ತರ ವಿರುದ್ಧ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಹಿಂದೂ ಕಾರ್ಯಕರ್ತರನ್ನು ಗಡೀಪಾರು ಮಾಡುತ್ತಿದ್ದಾರೆ. ಹಿಂದುತ್ವ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹೇಳಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಪ್ರತಿಕ್ರಿಯೆ ನೀಡಿ, ದಕ್ಷಿಣ ಕನ್ನಡದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರುಗಳ ಮನೆಗೆ ಪೊಲೀಸರು ರಾತ್ರೋರಾತ್ರಿ ನುಗ್ಗಿ, ಅವರ ಫೋಟೋ ತೆಗೆಯುವುದು, ಜಿಪಿಎಸ್ ಲೊಕೇಶನ್ ಪಡೆಯುತ್ತಿರುವುದು ಹಾಗೂ ಎಫ್‌ಐಆರ್ ದಾಖಲಿಸುತ್ತಿರುವ ಬಗ್ಗೆ ತಿಳಿದುಬಂದಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಈ ರೀತಿ ನಡೆಸಿಕೊಳ್ಳುತ್ತಿರುವುದು ತೀವ್ರ ಕಳವಳಕಾರಿ ಹಾಗೂ ಆತಂಕಕಾರಿಯಾಗಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಮಂತ್ರಿ ಡಾ. ಜಿ. ಪರಮೇಶ್ವರ್ ಅವರೇ, ಕರ್ನಾಟಕವನ್ನು ಮತ್ತೊಂದು ಪಶ್ಚಿಮ ಬಂಗಾಳ ಮಾಡಲು ಹೊರಟಿದ್ದೀರಾ? ಪ್ರಜಾಪ್ರಭುತ್ವದ ಸರ್ಕಾರವೊಂದು ತನ್ನ ನಾಗರಿಕರನ್ನು ನಡಿಸಿಕೊಳ್ಳುವ ಪರಿ ಇದೆಯೇ? ನಿಮ್ಮ ಅಸಮರ್ಥತೆ ಹಾಗೂ ದುರ್ಬಲ ಕಾನೂನು ಸುವ್ಯವಸ್ಥೆಯ ಪರಿಣಾಮದಿಂದ ರಾಜ್ಯದಲ್ಲಿ ಕುಕೃತ್ಯಗಳು ನಡೆಯುತ್ತಿವೆ. ಈ ಪ್ರಕರಣಗಳಲ್ಲಿ ಮುಸ್ಲಿಂ ಓಲೈಕೆಯ ರಾಜಕೀಯ ಅಜೆಂಡಾ ಈಡೇರಿಸಿಕೊಳ್ಳಲು, ಹಿಂದೂ ಕಾರ್ಯಕರ್ತರಿಗೆ ಕಿರುಕುಳ ನೀಡುವುದನ್ನು ಕಾಂಗ್ರೆಸ್ ಸರ್ಕಾರ ತಕ್ಷಣವೇ ನಿಲ್ಲಿಸಬೇಕೆಂದು ಆಗ್ರಹಿಸುತ್ತೇನೆಂದು ತಿಳಿಸಿದ್ದಾರೆ.
Advertisement