
ಬೆಂಗಳೂರು: ವಿಧಾನಸೌಧದ ಮುಂದೆ ಕಾಲ್ತುಳಿತ ಆಗಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಸಬೂಬಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದಾರೆ.
ವಿಧಾನಸೌಧ ಮೆಟ್ಟಿಲು ಮೇಲೆ ಸರಕಾರ ವಿಜಯೋತ್ಸವ ಆಚರಿಸಿತು. ಅಲ್ಲಿ ಯಾರೂ ಸಾಯಲಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯಷ್ಟೇ ಕಾಲ್ತುಳಿತ ಸಂಭವಿಸಿ ಜನ ಸತ್ತಿದ್ದಾರೆ. ಸನ್ಮಾನ್ಯ ಸಿದ್ದರಾಮಯ್ಯನವರೇ ನೀವು ಕರ್ನಾಟಕದ ಮುಖ್ಯಮಂತ್ರಿಯೋ ಅಥವಾ ವಿಧಾನಸೌಧ ಮೆಟ್ಟಿಲುಗಳಿಗಷ್ಟೇ ಮುಖ್ಯಮಂತ್ರಿಯೋ!? ದಯವಿಟ್ಟು ಹೇಳುವಿರಾ? ದುರಂತದ ಹೊಣೆಯನ್ನು ಪೊಲೀಸರ ಮೇಲಷ್ಟೇ ಎತ್ತಿಹಾಕಿ 'ಕೈ' ತೊಳೆದುಕೊಳ್ಳುವುದು ಎಷ್ಟು ಸರಿ? ಪ್ರತಿಪಕ್ಷಗಳನ್ನು ದೂರಿ ಪಾರಾಗುವ ಹುನ್ನಾರವೇಕೆ? #ಮೆಟ್ಟಿಲುಮುಖ್ಯಮಂತ್ರಿ ಎಂದು ಕಿಚಾಯಿಸಿದ್ದಾರೆ.
ಕಾರ್ಯಕ್ರಮಕ್ಕೆ ಬನ್ನಿ ಎಂದು ಆಹ್ವಾನ ನೀಡಿದವರು ನರಿಗಳು, ಬಂದವರು ಕುರಿಗಳು ಎಂಬಂತಿದೆ ನಿಮ್ಮ ಲಜ್ಜೆಗೆಟ್ಟ ಸಮರ್ಥನೆ. ಈ ಐತಿಹಾಸಿಕ ಸಂಭ್ರಮದಲ್ಲಿ ನೀವು ಭಾಗಿಯಾಗಿ ಎಂದು ಸಿದ್ದರಾಮಯ್ಯ ಆಹ್ವಾನಿಸಿದರು.
ಸಂಜೆ 4 ಗಂಟೆಗೆ ಸ್ಡೇಡಿಯಂ,,, ಸ್ಟೇಡಿಯಂಗೆ ಬನ್ನಿ" ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಮಾಧ್ಯಮಗಳ ಮೂಲಕ ಆಹ್ವಾನ ನೀಡಿದರು. ರಾಜ್ಯ ಸರ್ಕಾರ ಯಾವುದೇ ಒಂದು ಕಾರ್ಯಕ್ರಮ ಆಯೋಜಿಸಬೇಕಾದರೆ ಗುಪ್ತಚರ ಇಲಾಖೆ ಮಾಹಿತಿ ಅನುಸರಿಸಿ ಅಗತ್ಯ ಪೂರ್ವಸಿದ್ಧತೆ, ಪೊಲೀಸ್ ಭದ್ರತೆ, ಜನಸಂದಣಿ ನಿರ್ವಹಣೆ ಮಾಡಬೇಕು ಎಂಬ ಕನಿಷ್ಠ ಜ್ಞಾನ ಇಲ್ಲವಾಯ್ತೇ ? ಎಂದು ಜೆಡಿಎಸ್ ಪ್ರಶ್ನಿಸಿದೆ. 11 ಮುಗ್ಧ ಆರ್‌ಸಿಬಿ ಅಭಿಮಾನಿಗಳನ್ನು ಬಲಿ ಪಡೆದ ಮೇಲೂ ನಿಮ್ಮ ಸಮರ್ಥನೆ ಅಸಹ್ಯ ಹುಟ್ಟಿಸುತ್ತಿದೆ. ಕರುನಾಡಿನ ಜನರು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಈ ಮಹಾದುರಂತವನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಜೆಡಿಎಸ್ ಕಿಡಿಕಾರಿದೆ.
Advertisement