
ಬೆಂಗಳೂರು: ರಾಜ್ಯದಲ್ಲಿ ಜಾತಿ ಗಣತಿ ವಿಚಾರ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ. ದಶಕಗಳ ಹಿಂದಿನ ಅಂಕಿ-ಅಂಶ ಆಧರಿಸಿ ಕರ್ನಾಟಕದ ಜಾತಿ ಗಣತಿ ವರದಿ ಜಾರಿಗೆ ಪ್ರಬಲ ಸಮುದಾಯಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇದೀಗ ಮರು ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ.
ಸರ್ಕಾರದ ಈ ನಿರ್ಧಾರದ ವಿರುದ್ಧ ಬಿಜೆಪಿ ತೀವ್ರವಾಗಿ ಕಿಡಿಕಾರಿದ್ದು, ಮರು ಜಾತಿಗಣತಿ ಮಾಡಲು ಹೊರಟಿರುವ ರಾಜ್ಯ ಸರ್ಕಾರ ಈಗಾಗಲೇ ಜಾತಿಗಣತಿಗಾಗಿ ಖರ್ಚು ಮಾಡಿರುವ ರೂ.160 ಕೋಟಿ ಗೂ ಹೆಚ್ಚು ಹಣ ಸಂಪೂರ್ಣ ವ್ಯರ್ಥ ಎಂದು ಒಪ್ಪಿಕೊಳ್ಳುತ್ತಿದ್ದಾರೆಯೇ? ಎಂದು ಪ್ರಶ್ನಿಸಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರ ತನ್ನ ಆಡಳಿತ ವೈಫಲ್ಯದಿಂದ ಬಿಕ್ಕಟ್ಟಿಗೆ ಸಿಲುಕಿದಾಗಲೆಲ್ಲಾ, ಜಾತಿ ಜನಗಣತಿಯನ್ನು ಪ್ರಸ್ತಾಪಿಸುತ್ತದೆ ಅದು ಸಾಮಾಜಿಕ ಕಾಳಜಿಯಿಂದಲ್ಲ, ಬದಲಾಗಿ ನಾಡಿನ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸದಾ ಸಂಚು ರೂಪಿಸುತ್ತಿರುತ್ತದೆ.
ಬೆಂಗಳೂರಿನ ದುರಂತದ ಕಾಲ್ತುಳಿತದ 11 ಅಮಾಯಕರ ಸಾವುಗಳಿಗೆ ರಾಜ್ಯವಷ್ಟೇ ಅಲ್ಲ ದೇಶವೇ ಮಮ್ಮಲ ಮರುಗುತ್ತಿದೆ. ಆದರೆ ಪ್ರಚಾರದ ಗೀಳಿಗೆ ಇಳಿದು ದೇಶದ ಜನಸಾಮಾನ್ಯರ ಆಕ್ರೋಶ ಎದುರಿಸುತ್ತಿರುವ ಕಾಂಗ್ರೆಸ್ ಸರ್ಕಾರ ಜನಗಣತಿಯನ್ನು ಪುನಃ ಪ್ರಸ್ತಾಪಿಸುವ ಮೂಲಕ ತನ್ನ ಹುಳುಕು ಮುಚ್ಚಿಕೊಳ್ಳಲು ಹೊರಟಿರುವುದು ನಿಜಕ್ಕೂ ದುರ್ದೈವದ ಸಂಗತಿ ಎಂದು ಕಿಡಿಕಾರಿದ್ದಾರೆ.
ಮರು ಜಾತಿಗಣತಿ ಮಾಡಲು ಹೊರಟಿರುವ ರಾಜ್ಯ ಸರ್ಕಾರ ಈಗಾಗಲೇ ಜಾತಿಗಣತಿಗಾಗಿ ಖರ್ಚು ಮಾಡಿರುವ ರೂ.160 ಕೋಟಿ ಗೂ ಹೆಚ್ಚು ಹಣ ಸಂಪೂರ್ಣ ವ್ಯರ್ಥ ಎಂದು ಒಪ್ಪಿಕೊಳ್ಳುತ್ತಿದ್ದಾರೆಯೇ? ಉಪಮುಖ್ಯಮಂತ್ರಿಗಳ ಹೇಳಿಕೆಯಿಂದ ಈ ಸಂಗತಿ ಬಹಿರಂಗವಾದಂತಿದೆ. ಕಾಂಗ್ರೆಸ್ ಸರ್ಕಾರದ ಈ ಕುಟಿಲ ಬುದ್ದಿ, ಬೇಜವಾಬ್ದಾರಿತನ ಹಾಗೂ ಜನ ಪೀಡಕ ನಿಲುವುಗಳಿಗೆ ಜನರು ತಕ್ಕಪಾಠ ಕಲಿಸುವ ಕಾಲ ಸನ್ನಿಹಿತವಾಗಿದೆ ಎಂದು ಹೇಳಿದ್ದಾರೆ.
Advertisement