
ಕಲಬುರಗಿ: ಗುಜರಾತ್‌ನ ಅಹಮದಾಬಾದ್‌ನಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದ ಭೀಕರ ವಿಮಾನ ದುರಂತದ ಬಗ್ಗೆ ಎಐಸಿಸಿ ಅಧ್ಯಕ್ಷ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
ಇಂದು ಕಲಬುರಗಿಯಲ್ಲಿ ತರಾತುರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಂತಾಪ ಸೂಚಿಸಿದರು ಮತ್ತು ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದರು. ಗಾಯಗೊಂಡವರಿಗೆ ಮತ್ತು ಮೃತರ ಕುಟುಂಬಗಳಿಗೆ ಸಹಾಯ ಮಾಡುವಂತೆ ಕಾಂಗ್ರೆಸ್ ಪಕ್ಷ ಸೇರಿದಂತೆ ಎಲ್ಲಾ ಸಂಘಟನೆಗಳ ಕಾರ್ಯಕರ್ತರಿಗೆ ಅವರು ಮನವಿ ಮಾಡಿದರು.
ಸಂತ್ರಸ್ತರಿಗೆ ಆರ್ಥಿಕ ಮತ್ತು ವೈದ್ಯಕೀಯ ನೆರವು ಸೇರಿದಂತೆ ಎಲ್ಲಾ ಅಗತ್ಯ ಸಹಾಯವನ್ನು ಒದಗಿಸುವ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳಬೇಕೆಂದು ಎಐಸಿಸಿ ಅಧ್ಯಕ್ಷರು ಒತ್ತಾಯಿಸಿದರು. "ಎಲ್ಲಾ ಗಾಯಾಳುಗಳಿಗೆ ಆದ್ಯತೆಯ ಚಿಕಿತ್ಸೆ ದೊರೆಯುವಂತೆ ಸರ್ಕಾರ ಖಚಿತಪಡಿಸಿಕೊಳ್ಳಬೇಕು" ಎಂದು ಖರ್ಗೆ ಹೇಳಿದರು.
ವಿಮಾನ ಪತನವಾಗಲು ತಾಂತ್ರಿಕ ದೋಷವೋ ಅಥವಾ ಇತರ ಕಾರಣವೋ ಗೊತ್ತಾಗಿಲ್ಲ. ಈ ದುರ್ಘಟನೆಯಲ್ಲಿ ಹಲವು ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಭಾರತೀಯರು ಮತ್ತು ಬ್ರಿಟಿಷ್ ಪ್ರಜೆಗಳು ಇದ್ದರು ಎಂಬುದೂ ತಿಳಿದು ಬಂದಿದೆ. ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಖರ್ಗೆ ಒತ್ತಾಯಿಸಿದರು.
"ಘಟನೆ ಏಕೆ ನಡೆಯಿತು ಮತ್ತು ದುರಂತಕ್ಕೆ ಯಾರು ಕಾರಣ ಎಂಬುದರ ಕುರಿತು ಸತ್ಯವನ್ನು ತಿಳಿಯಲು ಕೇಂದ್ರ ಸರ್ಕಾರ, ಹಾಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಅಥವಾ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು" ಎಂದು ಖರ್ಗೆ ಹೇಳಿದರು.
ವಿಮಾನ ಬೇಗ ಹೊರಡುವಂತೆ ಒತ್ತಡವಿತ್ತು ಎಂಬ ಮಾಹಿತಿ ಲಭ್ಯವಾಗಿದ್ದು, ಈ ಆಯಾಮದಲ್ಲೂ ತನಿಖೆ ಮಾಡಬೇಕು. ಪೈಲಟ್ ತಪ್ಪೋ, ತಾಂತ್ರಿಕ ದೋಷವೋ, ಮತ್ತೇನಾದರೂ ಕಾರಣವಾಗಿರಬಹುದೆಂಬ ಬಗ್ಗೆ ಸಂಪೂರ್ಣ ಸ್ಪಷ್ಟತೆ ಹೊರ ಬರಬೇಕಾಗಿದೆ ಎಂದಿದ್ದಾರೆ.
Advertisement