
ಬೆಂಗಳೂರು: ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರನ್ನು ಪಕ್ಷದ ಹೊಸ ಭರವಸೆ ಎಂದು ಬಿಂಬಿಸಲಾಗುತ್ತಿದ್ದು, ಹೀಗಾಗಿ ಅವರಿಗೆ ರಾಜ್ಯಾದ್ಯಂತ ಮಿಸ್ಡ್ ಕಾಲ್ ಅಭಿಯಾನದ ಮೂಲಕ ಪಕ್ಷವನ್ನು ನಿರ್ಮಿಸುವ ಮತ್ತು ಅದರ ನೆಲೆಯನ್ನು ಬಲಪಡಿಸುವ ಕಾರ್ಯವನ್ನು ವಹಿಸಲಾಗಿದೆ.
ಪದೇ ಪದೇ ಚುನಾವಣೆಗಳಲ್ಲಿ ಸೋಲನುಭವಿಸಿದ್ದರೂ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ ಮತ್ತು ಜೆಡಿಎಸ್ ವರಿಷ್ಠ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗ ನಿಖಿಲ್ ಅವರನ್ನು ಪಕ್ಷದಲ್ಲಿ ಉತ್ತಮ ಸ್ಥಾನಮಾನ ನೀಡಲಾಗುತ್ತಿದೆ., ಇತ್ತೀಚೆಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ನಿಖಿಲ್ ಅವರ ಇದುವರೆಗಿನ ರಾಜಕೀಯ ಪ್ರಯಾಣದ ಬಗ್ಗೆ ಗಮನ ಹರಿಸಿದರೇ ಅನಾಮತು ಮೂರು ಚುನಾವಣೆಗಳಲ್ಲಿ ಸೋಲನುಭವಿಸಿದ್ದಾರೆ. 2019 ರ ಮಂಡ್ಯ ಲೋಕಸಭಾ ಚುನಾವಣೆ, 2023 ರ ರಾಮನಗರ ವಿಧಾನಸಭಾ ಚುನಾವಣೆ ಮತ್ತು ಇತ್ತೀಚೆಗೆ ಅವರ ತಂದೆಯಿಂದ ತೆರವಾದ ಚನ್ನಪಟ್ಟಣ ಉಪಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ.
ಆದರೂ, ಸೋಲಿನಿಂದ ಕಂಗೆಡೆದ ನಿಖಿಲ್ 50 ಲಕ್ಷ ಜನರೊಂದಿಗೆ ಸಂಪರ್ಕ ಸಾಧಿಸುವ ಹೊಸ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ, ನಮ್ಮ ಕಾರ್ಯಕರ್ತರಿಗೆ ನಾವು ಒಂದು ಕಾರ್ಯವನ್ನು ವಹಿಸಿದ್ದೇವೆ. ನಾಳೆಯಿಂದ ಪ್ರಾರಂಭಿಸಿ, ಎರಡು ತಿಂಗಳುಗಳಲ್ಲಿ ಹಲವಾರು ಜಿಲ್ಲೆಗಳಿಗೆ ಭೇಟಿ ನೀಡುತ್ತೇವೆ. ಆರಂಭದಲ್ಲಿ ನಾವು ಸುಮಾರು 23 ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತೇವೆ. ನಂತರ ಇತರ ಪ್ರದೇಶಗಳಿಗೆ ಹೋಗುತ್ತೇವೆ" ಎಂದು ನಿಖಿಲ್ ಹೇಳಿದ್ದಾರೆ.
ತಳಮಟ್ಟದಿಂದ ಪಕ್ಷವನ್ನು ಬಲಪಡಿಸುವುದು. ಕಾರ್ಯಕರ್ತರನ್ನು ಗುರುತಿಸಿ, ಅವರಿಗೆ ಉತ್ಸಾಹ ತುಂಬುವುದು ಮೊದಲು ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಪಕ್ಷ ಪ್ರಬಲ ಇರುವ ಜಿಲ್ಲೆಗಳಲ್ಲಿ ತಳಮಟ್ಟದಲ್ಲಿ ಮತ್ತಷ್ಟು ಕಾರ್ಯಕರ್ತರನ್ನು ಸಿದ್ಧ ಮಾಡುವ ನಿಟ್ಟಿನಲ್ಲಿ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ.
ನಿಖಿಲ್ ಯಾವುದೇ ಚುನಾವಣೆಯಲ್ಲಿ ಗೆದ್ದಿಲ್ಲದಿದ್ದರೂ ಪ್ರಮುಖ ವಿಷಯಗಳ ಕುರಿತು ಮಾತನಾಡುತ್ತಿರುತ್ತಾರೆ ಎಂದು ರಾಜಕೀಯ ವಿಶ್ಲೇಷಕ ಬಿಎಸ್ ಮೂರ್ತಿ ಹೇಳಿದರು. "ಜೆಡಿಎಸ್ ಅವರನ್ನು ಯುವ ಅಧ್ಯಕ್ಷರನ್ನಾಗಿ ಮಾಡಿತು ಮತ್ತು ಅವರ ಸೋದರಸಂಬಂಧಿಗಳಾದ ಪ್ರಜ್ವಲ್ ಮತ್ತು ಸೂರಜ್ ರೇವಣ್ಣ ಸಾರ್ವಜನಿಕ ಜೀವನದಿಂದ ಬಹುತೇಕ ದೂರವಿದ್ದರೂ ನಿಖಿಲ್ ಹೊಸ ನಾಯಕನಾಗಿ ಹೊರಹೊಮ್ಮುತ್ತಿದ್ದಾರೆ ಎಂದು ಅಭಿಪ್ರಾಯ ಪಡುತ್ತಿದ್ದಾರೆ.
"ಜೆಡಿಎಸ್ ಪಕ್ಷ ಎಂದಿಗೂ ಕುಟುಂಬೇತರ ನಾಯಕನನ್ನು ಬೆಳೆಸಿಲ್ಲ, ಇದೇ ಕಾರಣಕ್ಕಾಗಿ ಪಕ್ಷ ನೆಲ ಕಚ್ಚುವ ಪರಿಸ್ಥಿತಿ ತಲುಪಿದೆ. ಕೆಲವು ದಶಕಗಳ ಹಿಂದೆ, ಜನತಾ ಪರಿವಾರವನ್ನು ಎಂಪಿ ಪ್ರಕಾಶ್ ಮತ್ತು ಸಿದ್ದರಾಮಯ್ಯ ಅವರಂತಹ ನಾಯಕರಿಗೆ ಕಾರ್ಖಾನೆ ಎಂದು ಪರಿಗಣಿಸಲಾಗಿತ್ತು, ಆದರೆ ಇಂದು ಅದಕ್ಕೆ ಯಾವುದೇ ಆ ರೀತಿಯ ಮುಖಗಳಿಲ್ಲ.
ಕುಮಾರಸ್ವಾಮಿ ನಂತರ ಪಕ್ಷಕ್ಕೆ ಯಾವುದೇ ಉತ್ತರಾಧಿಕಾರಿ ಇಲ್ಲದ ಕಾರಣ ಸದ್ಯ ನಿಖಿಲ್ ಭರವಸೆಯ ನಾಯಕರಾಗಿ ಬೆಳೆಯುತ್ತಿದ್ದಾರೆ ಎಂದು ಮೂರ್ತಿ ಹೇಳಿದರು. ಪಕ್ಷದ ತಂತ್ರವು ಪೀಳಿಗೆಯ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ. ಗೌಡರು ತಮ್ಮ ತೊಂಬತ್ತರ ದಶಕದಲ್ಲಿ ಮತ್ತು ಕುಮಾರಸ್ವಾಮಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಕಡಿಮೆ ಮಾಡಿರುವುದರಿಂದ, ನಿಖಿಲ್ ಪ್ರಮುಖ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಆದರೆ ಈ ವಾದವನ್ನು ಎಲ್ಲರೂ ಒಪ್ಪಲು ಸಾಧ್ಯವಿಲ್ಲ, ಅವರು ರಾಜಕೀಯದಲ್ಲಿ ಬೆಳೆಯಬೇಕೇಂದು ಬಯಸುತ್ತಿದ್ದಾರೆ. ಭವಿಷ್ಯದ ಮುಖ್ಯಮಂತ್ರಿಯಾಗುವುದು ದೂರದ ಕನಸು ಎಂದು ತೋರುತ್ತದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಪ್ರೊ. ಪಿ.ಎಸ್. ಜಯರಾಮು ಎಚ್ಚರಿಸಿದ್ದಾರೆ.
ಕರ್ನಾಟಕದ ಮತದಾರರು ನಿಖಿಲ್ ಅವರನ್ನು ಪ್ರತಿಸ್ಪರ್ಧಿಯಾಗಿ ನೋಡುತ್ತಾರೆಯೇ ಅಥವಾ ಇನ್ನೊಂದು ಕುಟುಂಬ ರಾಜಕಾರಣ ಬ್ರಾಂಡ್ ನಲ್ಲೇ ಜನ ಮುಂದುವರಿಸುತ್ತಾರೆಯೇ ಎಂಬುದು ಈಗ ಪ್ರಮುಖ ಪ್ರಶ್ನೆಯಾಗಿದೆ. ರಾಜಕೀಯವು ಹೆಚ್ಚು ಸ್ಪರ್ಧಾತ್ಮಕವಾಗುತ್ತಿರುವಾಗ ನಿಖಿಲ್ ಜೆಡಿಎಸ್ ಪಕ್ಷಕ್ಕೆ ಎಷ್ಟರ ಮಟ್ಟಿಗೆ ಅನುಕೂಲಕರವಾಗಲಿದ್ದಾರೆ? ಅಷ್ಟೇ ಅಲ್ಲದೆ, ಸ್ವತಃ ನಿಖಿಲ್ ಕುಮಾರಸ್ವಾಮಿ ನಾಯಕತ್ವವನ್ನು ಪಕ್ಷದಲ್ಲಿ ವೃದ್ದಿಸಲು ಇದು ಅನುಕೂಲಕರ ಆಗಲಿದ್ಯಾ? ಎಂಬುದನ್ನು ಕಾದು ನೋಡಬೇಕು.
Advertisement