
ಬೆಂಗಳೂರು: ಕುರ್ಚಿ ಉಳಿಸಿಕೊಳ್ಳುವುದಕ್ಕೂ ಮರು ಸಮೀಕ್ಷೆಗೂ ಏನು ಸಂಬಂಧ? ಜಾತಿಗಣತಿ ಮಾಡದಿದ್ದರೆ ಅಪ್ಪನ ಕುರ್ಚಿ ಹೋಗ್ಬಿಡುತ್ತಾ?, ಕುರ್ಚಿ ಭದ್ರವಾಗಿಯೇ ಇರುತ್ತೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಹೊಸ ಸಾಮಾಜಿಕ-ಆರ್ಥಿಕ ಸಮೀಕ್ಷೆ ವ್ಯರ್ಥ ವೆಚ್ಚವಲ್ಲ, ಏಕೆಂದರೆ ಇದು ಸಮಾಜ ಮತ್ತು ರಾಜ್ಯಕ್ಕೆ ಈಗಿನ ಅಗತ್ಯವಾಗಿದೆ ಎಂದು ಹೇಳಿದರು.
ಜಾತಿ ಗಣತಿ ಹೈಕಮಾಂಡ್ ಮಟ್ಟದಲ್ಲೂ ಚರ್ಚೆ ಆಗಿರೋದು ಒಳ್ಳೆಯ ಬೆಳವಣಿಗೆ. ಹೈಕಮಾಂಡ್ ಕೂಡ ಜಾತಿಗಣತಿ ಜಾರಿ ಮಾಡುವ ಮುನ್ನಾ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲು ಹೇಳಿದೆ. ಈ ಹಿಂದೆ ನಮ್ಮ ಸರ್ಕಾರ ನಡೆಸಿದ್ದ ಜಾತಿ ಸಮೀಕ್ಷೆಯನ್ನು ವಿಪಕ್ಷಗಳು ವಿರೋಧ ಮಾಡಿದ್ದರಿಂದ ಮರು ಸಮೀಕ್ಷೆ ಮಾಡಲಾಗುತ್ತಿದೆಯಷ್ಟೇ. ಜಾತಿ ಗಣತಿ ಬಗ್ಗೆ ಜನರ ದಿಕ್ಕು ತಪ್ಪಿಸಿದರು. ವಿರೋಧ ಮಾಡದಿದ್ದರೆ ಹಿಂದಿನ ಸಮೀಕ್ಷೆಯೇ ಜಾರಿಯಾಗುತ್ತಿತ್ತು. ಈಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮರು ಸಮೀಕ್ಷೆ ಮಾಡುತ್ತೇವೆ. ತೆಲಂಗಾಣ ಮತ್ತು ಬಿಹಾರ ಸರ್ಕಾರಗಳು ಸಮೀಕ್ಷೆಯನ್ನು ಪೂರ್ಣಗೊಳಿಸಿರುವುದರಿಂದ ಸಮೀಕ್ಷೆ ಮಾಡುವುದು ಸರ್ಕಾರಕ್ಕೆ ದೊಡ್ಡ ಸವಾಲಲ್ಲ ಎಂದು ತಿಳಿಸಿದರು.
ಇದೇ ವೇಳೆ ಸಿಎಂ ಕುರ್ಚಿ ಉಳಿಸಿಕೊಳ್ಳಲು ಜಾತಿ ಮರು ಸಮೀಕ್ಷೆ ಮಾಡಲಾಗುತ್ತಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕುರ್ಚಿ ಉಳಿಸಿಕೊಳ್ಳಲಿಕ್ಕೂ ಮರು ಸಮೀಕ್ಷೆಗೂ ಏನು ಸಂಬಂಧ?, ಜಾತಿಗಣತಿ ಮಾಡದಿದ್ದರೆ ಅಪ್ಪನ ಕುರ್ಚಿ ಹೋಗಿ ಬಿಡುತ್ತಾ? ಕುರ್ಚಿ ಭದ್ರವಾಗಿಯೇ ಇರುತ್ತೆ. ಸಾಮಾಜಿಕ ಶೈಕ್ಷಣಿಕವಾಗಿ ಎಲ್ಲರನ್ನು ಮೇಲಕ್ಕೆತ್ತುವ ನಿಟ್ಟಿನಲ್ಲಿ ಜಾತಿಗಣತಿ ಮಾಡುತ್ತೇವೆ. ಟೀಕೆ ಮಾಡುವುದೇ ಬಿಜೆಪಿ ನಾಯಕರ ಕೆಲಸ ಎಂದು ಕಿಡಿಕಾರಿದರು.
ನವೆಂಬರ್ ತಿಂಗಳಿಗೆ ಸಿಎಂ ಸ್ಥಾನ ಅಧಿಕಾರ ಹಂಚಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಮೊದಲಿಂದಲೂ ಅಧಿಕಾರ ಹಂಚಿಕೆ ಬಗ್ಗೆ ಹೇಳುತ್ತಿದ್ದಾರೆ. ನಮ್ಮ ಪಕ್ಷ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಚೆನ್ನಾಗಿ ಕೆಲಸ ಮಾಡುತ್ತಿದೆ. ಸಿಎಂ ಬದಲಾವಣೆ ಮಾಡಲಿಕ್ಕೆ ಯಾವುದೇ ಕಾರಣಗಳು ಇಲ್ಲ. ಇದು ಪಕ್ಷದ ತೀರ್ಮಾನಕ್ಕೆ ಬಿಟ್ಟಿದ್ದು. ಇದರ ಬಗ್ಗೆ ಯಾರು ಪ್ರತಿಕ್ರಿಯೆ ಕೊಡೋದು ಬೇಡ ಎಂದರು.
Advertisement