
ನವದೆಹಲಿ/ಬೆಂಗಳೂರು: ವಸತಿ ಇಲಾಖೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ಸೋಮವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನವದೆಹಲಿ ತಮ್ಮ ಅಧಿಕೃತ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು ಅನುದಾನಕ್ಕಾಗಿ, ಸರ್ಕಾರ ಯೋಜನೆಗಳಿಗಾಗಿ ಕಚೇರಿಗಳ ಸುತ್ತ, ಮಂತ್ರಿಮಹೋದಯರ ಸುತ್ತ ತಬರನಂತೆ ಸುತ್ತುತ್ತಿದ್ದಾರೆ. ಆಡಳಿತ ಪಕ್ಷದ ಸದಸ್ಯರಿಗೇ ಇಂಥ ದುರ್ಗತಿ ಬಂದರೆ ಇತರೆ ಪಕ್ಷಗಳ ಶಾಸಕರ ಪರಿಸ್ಥಿತಿ ಏನು? ಎಂದು ಪ್ರಶ್ನಿಸಿದರು.
ಬಿ.ಆರ್.ಪಾಟೀಲ್ ಅವರ ಕ್ಷೇತ್ರದಲ್ಲಿ 950 ಮನೆಗಳನ್ನು ಶಾಸಕರ ಗಮನಕ್ಕೆ ಬಾರದಂತೆ ವಸತಿ ಇಲಾಖೆಯಿಂದ ನೀಡಿದ್ದಾರೆ. ಪಾಟೀಲ್ ಅವರು ವಸತಿ ಸಚಿವರ ಆಪ್ತ ಕಾರ್ಯದರ್ಶಿಗೆ ಕರೆ ಮಾಡಿ ಪ್ರಶ್ನಿಸಿದರೆ, ಅವರು ಏನು ಉತ್ತರ ನೀಡಿದ್ದಾರೆ ಎಂಬುದು ಆಡಿಯೋ ಮೂಲಕ ವೈರಲ್ ಆಗಿದೆ. ನಿಖರವಾದ ಪ್ರಕರಣ ಇದ್ದರೆ ದೂರು ಕೊಡಿ, ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಶಾಸಕರಿಗೆ ವಸತಿ ಸಚಿವ ಆಪ್ತ ಕಾರ್ಯದರ್ಶಿ ಉತ್ತರ ಕೊಡುತ್ತಾರೆ. ಆ ವ್ಯಕ್ತಿಗೆ ಕ್ರಮ ತೆಗೆದುಕೊಳ್ಳುವ ಅಧಿಕಾರ ಕೊಟ್ಟಿದ್ದಾರಾ ಸಚಿವರು? ವಸೂಲಿ ಮಾಡುವ ಪವರ್ ಕೊಟ್ಟಿದ್ದಾರಷ್ಟೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ಇಲಾಖೆಯಲ್ಲಿ ಈ ಮಟ್ಟಕ್ಕೆ ಅವ್ಯವಹಾರ ಆಗಿದೆ ಎಂದರೆ, ದಲ್ಲಿ ಮುಖ್ಯಮಂತ್ರಿ ಇದ್ದಾರೆಯೇ ಎನ್ನುವ ಅನುಮಾನ ಬರುತ್ತಿದೆ. ಉಪ ಮುಖ್ಯಮಂತ್ರಿಯವರು ಬಿ.ಆರ್. ಪಾಟೀಲ್ ಹೇಳಿದ್ದು ಸುಳ್ಳು ಎನ್ನುತ್ತಿದ್ದಾರೆ. ಕಾಗವಾಡ ಶಾಸಕ ರಾಜುಕಾಗೆ ಕೂಡ ಇದೇ ಆರೋಪ ಮಾಡಿದ್ದಾರೆ. ಮುಖ್ಯಮಂತ್ರಿ ಉದ್ದೇಶ ಏನು? ಶಾಸಕಾಂಗ ಪಕ್ಷದಲ್ಲಿ ಅನುದಾನ ಕೊಡುತ್ತೇವೆ, ಅಭಿವೃದ್ಧಿ ಮಾಡುತ್ತೇವೆ ಎಂದವರು ಈಗ ಶಾಸಕರಿಗೆ ಕಮೀಷನ್ ಕಿರುಕುಳ ಕೊಡುತ್ತಿದ್ದಾರೆ. ಶಾಸಕರು ಕ್ಷೇತ್ರಗಳಿಗೆ ಹೋಗದ ರೀತಿಯಲ್ಲಿ ಒತ್ತಡಕ್ಕೆ ಸಿಲುಕಿದ್ದಾರೆ ಎಂದು ಆರೋಪ ಮಾಡಿದರು.
ಶಾಸಕ ಬೇಳೂರು ಗೋಪಾಲಕೃಷ್ಣ ಅವರು ವಸತಿ ಸಚಿವರು ರಾಜಿನಾಮೆ ನೀಡಲಿ, ಅಕ್ರಮಗಳ ತನಿಖೆ ಆಗಲಿ ಎಂದು ಒತ್ತಾಯಿಸಿದ್ದಾರೆ. ನಿಮ್ಮ ಪಕ್ಷದ ಶಾಸಕರೇ ನಿಮ್ಮ ಮುಖಕ್ಕೆ ಮಂಗಳಾರತಿ ಎತ್ತುತ್ತಿದ್ದಾರೆ. ನಿಮ್ಮ ಶಾಸಕರ ಪರಿಸ್ಥಿತಿಯೇ ಹೀಗಾದರೆ ಜೆಡಿಎಸ್, ಬಿಜೆಪಿ ಶಾಸಕರ ಪರಿಸ್ಥಿತಿ ಏನು? ಅನುದಾನಕ್ಕಾಗಿ ಶಾಸಕರು ಅಲೆಯುತ್ತಿದ್ದಾರೆ. ಯಾರೋ ಮಧ್ಯದಲ್ಲಿ ನಿಂತಿದ್ದಾರೋ ಅವರು ಕಲೆಕ್ಷನ್ ಮಾಡುತ್ತಿದ್ದಾರೆ. ಶಾಸಕರು ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ಬರೆದಿದ್ದ ‘ತಬರನ ಕಥೆ’ ಎಂಬ ಕಥೆಯನ್ನು ಗಿರೀಶ್ ಕಾಸರವಳ್ಳಿ ಸಿನಿಮಾ ಮಾಡಿದ್ದರು. ವಾಚ್ ಮನ್ ಒಬ್ಬ ತನ್ನ ಪಿಂಚಣಿಗಾಗಿ ಸರಕಾರಿ ಕಚೇರಿಗಳಿಗೆ ಅಲೆ ಅಲೆದು ಬಸವಳಿಯುವ ಕಥೆ ಅದು. ಅಂಥದ್ದೇ ಪರಿಸ್ಥಿತಿ ರಾಜ್ಯದ ಶಾಸಕರಿಗೂ ಬಂದಿರುವುದು ದುರದೃಷ್ಟಕರ. ಶಾಸಕರು ಯೋಜನೆಗಳಾಗಿ ಮಂತ್ರಿಗಳು, ಇಂಜಿಯರ್ ಗಳ ಕಚೇರಿಗಳ ಸುತ್ತ ತಬರನಂತೆ ಸುತ್ತುತ್ತಿದ್ದಾರೆ. ರಾಜ್ಯದಲ್ಲಿ ಇಂಥ ದುಸ್ಥಿತಿ ಹಿಂದೆಂದೂ ಇರಲಿಲ್ಲ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಬಳಿ ಈ ಸರಕಾರಕ್ಕಿಂತಲೂ ದೊಡ್ಡವರು ಇದ್ದಾರೆ. ಆದುದರಿಂದಲೇ, ಸರಕಾರದ ಹಾಗೂ ಹಣಕಾಸು ಇಲಾಖೆಯ ಒಪ್ಪಿಗೆಯನ್ನೂ ಪಡೆಯದೇ 625 ಕೋಟಿ ರೂ.ಗಳಿಗೂ ಹೆಚ್ಚು ಹಣ ಬಿಡುಗಡೆ ಆಗಿದೆ. ಸಂಪುಟದ ಒಪ್ಪಿಗೆ ಪಡೆಯದೇ ಹಣ ವೆಚ್ಚ ಮಾಡಲಾಗಿದೆ. ಅಲ್ಪಸಂಖ್ಯಾತರಿಗೆ ಸೇರಿದ ಕೋಟಿ ಕೋಟಿ ಹಣ ಲೂಟಿ ಆಗಿದೆ. ಈ ಮುಖ್ಯಮಂತ್ರಿಗೆ ಅಧಿಕಾರದಲ್ಲಿ ಮುಂದುವರೆಯಲು ಯೋಗ್ಯತೆ ಇದೆಯಾ? ಎಂದು ವಾಗ್ದಾಳಿ ನಡೆಸಿದರು.
Advertisement