
ಬೆಂಗಳೂರು: ರಾಜು ಕಾಗೆ ಒಬ್ಬರೇ ಅಲ್ಲ, ಇನ್ನೂ ಹತ್ತಾರು ಅಸಮಾಧಾನಿತ ನಾಯಕರಿದ್ದಾರೆ. ಮುಂದೆ ಒಬ್ಬೊಬ್ಬರಿಗಾಗಿಯೇ ಸರ್ಕಾರ ವಿರುದ್ಧ ಧ್ವನಿ ಎತ್ತಲಿದ್ದಾರೆಂದು ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಆರ್.ಪಾಟೀಲ್, ರಾಜು ಕಾಗೆ ಮಾತ್ರವಲ್ಲ, ತಮ್ಮದೇ ಸರ್ಕಾರದ ವಿರುದ್ಧ ಸಾರ್ವಜನಿಕವಾಗಿ ಮಾತನಾಡುವ ಇನ್ನೂ ಅನೇಕ ಕಾಂಗ್ರೆಸ್ ಶಾಸಕರಿದ್ದಾರೆ. ಕಾದು ನೋಡಿ ಎಂದು ಹೇಳಿದ್ದಾರೆ.
ಬಿ.ಆರ್ ಪಾಟೀಲ್ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸಿಎಂ ಕರೆದರೂ ಕೂಡ ವಾಸ್ತವ ಸ್ಥಿತಿ ಹೇಳಿದ್ದೇನೆ ಎಂದಿದ್ದಾರೆ. ಆದರೆ, ಅವರ ಬಾಯಿ ಮುಚ್ಚಿಸುವ ಕೆಲಸ ಸಿದ್ದರಾಮಯ್ಯ ಮಾಡುತ್ತಿದ್ದಾರೆಂದು ಆರೋಪಿಸಿದರು.
ರಾಜ್ಯ ಸರ್ಕಾರದ ವಿರುದ್ಧ ಮಾತನಾಡಿದ ಆರೋಪದ ಮೇಲೆ ಇನ್ಫೋಸಿಸ್‌ನ ಮಾಜಿ ನಿರ್ದೇಶಕ ಮೋಹನ್ ದಾಸ್ ಪೈ ಮೇಲೆ ಕೇಸ್ ಹಾಕಿಸಿ ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಒಂದು ರೀತಿ ತುರ್ತು ಪರಿಸ್ಥಿತಿ ತರುವ ರೀತಿ ಮಾಡುತ್ತಿದ್ದಾರೆ. ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಸಪೋರ್ಟ್ ಮಾಡುತ್ತಿದ್ದಾರೆ. ನಾನು ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದೇನೆ, ಪ್ರತಿ ವಾರ ಒಂದು ಜಿಲ್ಲೆಗೆ ಭೇಟಿ ನೀಡಿ, ಸರ್ಕಾರದ ವೈಫಲ್ಯದ ಬಗ್ಗೆ ಜನರಿಗೆ ತಿಳಿಸಲು ಪ್ರಯತ್ನಿಸುತ್ತೇನೆಂದು ಹೇಳಿದರು.
ಏತನ್ಮಧ್ಯೆ, ಬೆಳಗಾವಿ ಸಂಸದ ಮತ್ತು ಬಿಜೆಪಿ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಅವರು ಕೂಡ ಕಾಗೆ ಸೇರಿದಂತೆ ಹಲವಾರು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲು ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ.
ನಾಯಕತ್ವದಲ್ಲಿ ಬದಲಾವಣೆ ಆಗುತ್ತದೆಯೇ ಎಂಬುದರ ಬಗ್ಗೆ ನನಗೆ ಖಚಿತವಿಲ್ಲ, ಆದರೆ, ಒಂದು ವಿಷಯ ಸ್ಪಷ್ಟವಾಗಿದೆ, ಸರ್ಕಾರ ಹೆಚ್ಚು ಕಾಲ ಉಳಿಯುವುದಿಲ್ಲ. ನಾವು ಆಪರೇಷನ್ ಕಮಲ ಮಾಡಲ್ಲ. ಆದರೆ, ಹತಾಶ ಕಾಂಗ್ರೆಸ್ ಶಾಸಕರು ತಾವಾಗಿಯೇ ಬಿಜೆಪಿ ಸೇರಲಿದ್ದಾರೆ. ನಾವು ಸೆಳೆಯುವ ಪ್ರಯತ್ನ ಮಾಡುತ್ತಿಲ್ಲ. ಅವರೇ ಬರ್ತಾರೆ ಇದಕ್ಕೆ ಆಪರೇಷನ್ ಕಮಲ ಅಂತಾರೆ ಎಂದು ತಿಳಿಸಿದ್ದಾರೆ.
Advertisement