
ಬೆಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಅಡಾಲ್ಫ್ ಹಿಟ್ಲರ್‌ಗೆ ಹೋಲಿಸಿ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್ ಮಾಡಿದ್ದಕ್ಕಾಗಿ ರಾಜ್ಯ ಬಿಜೆಪಿ ಘಟಕದ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಈ ದೂರನ್ನು ದಾಖಲಿಸಿದ್ದಾರೆ. ಜೂನ್ 25 ರಂದು ರಾಜ್ಯ ಬಿಜೆಪಿಯ ಅಧಿಕೃತ ಎಕ್ಸ್ ಖಾತೆಯಿಂದ ಮಾಡಲಾದ ಫೋಸ್ಟ್ ನಲ್ಲಿ INDIRA NOT EQUALS INDIA, INDIRA = HITLER" ಎಂದು ಫೋಸ್ಟ್ ಮಾಡಲಾಗಿತ್ತು.
ಜೊತೆಗೆ ಅದರೊಂದಿಗೆ 38 ಸೆಕೆಂಡ್ ಗಳ ವಿಡಿಯೋ ಕೂಡಾ ಇತ್ತು. ಆದರೆ, ಬಳಿಕ ಅದನ್ನು ಡಿಲೀಟ್ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವಿಡಿಯೋದಲ್ಲಿ ಭಾರತದಲ್ಲಿನ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಉಲ್ಲೇಖಿಸಲಾಗಿತ್ತು. ಇಂದಿರಾ ಗಾಂಧಿಯವರ ಬಗ್ಗೆ ಅವಹೇಳನಕಾರಿ ಎಂದು ವಿವರಿಸಿದ ಗ್ರಾಫಿಕ್ಸ್ ಅನ್ನು ಒಳಗೊಂಡಿತ್ತು. ಅದು ಅಗೌರವ ಮಾತ್ರವಲ್ಲದೆ ವಿವಿಧ ಧಾರ್ಮಿಕ ಮತ್ತು ಕೋಮು ಗುಂಪುಗಳ ನಡುವೆ ದ್ವೇಷವನ್ನು ಉಂಟುಮಾಡುವ ಗುರಿಯನ್ನು ಹೊಂದಿತ್ತು ಎಂದು ದೂರುದಾರರು ಆರೋಪಿಸಿದ್ದಾರೆ.
ಬಿಜೆಪಿಯ ಅಧಿಕೃತ ಸೋಷಿಯಲ್ ಮೀಡಿಯಾ ಹ್ಯಾಂಡಲ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕಾಂಗ್ರೆಸ್ ಮುಖಂಡ ಆಗ್ರಹಿಸಿದ್ದಾರೆ. ಹೈಗ್ರೌಂಡ್ಸ್ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಮತ್ತೊಂದು ಫೋಸ್ಟ್ ನಲ್ಲಿ #SamvidhanHatyaDiwas ಹ್ಯಾಶ್‌ಟ್ಯಾಗ್‌ನೊಂದಿಗೆ ಇಂದಿರಾ ಗಾಂಧಿಯವರ ಈ ಕ್ರೌರ್ಯವನ್ನು ದೇಶವು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಲಾಗಿತ್ತು. 50 ವರ್ಷಗಳ ಹಿಂದೆ ಇಂದಿರಾಗಾಂಧಿ ಅವರು ಕಾನೂನು, ನ್ಯಾಯಾಂಗ ಮತ್ತು ಪ್ರಜಾಪ್ರಭುತ್ವವನ್ನು ಕತ್ತಲೆಯ ಕೋಣೆಗೆ ತಳ್ಳಿ ಬೀಗ ಹಾಕಿದ ಕರಾಳ ನೆನಪು ಅವರ ನಿರಂಕುಶ ಆಡಳಿತವನ್ನು ಗುರುತಿಸುತ್ತದೆ" ಎಂದು ಮತ್ತೊಂದು ಪೋಸ್ಟ್ ನಲ್ಲಿ ಟೀಕಿಸಲಾಗಿತ್ತು.
Advertisement