
ಬೆಂಗಳೂರು: ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಿರುವುದು ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಪ್ರಜಾಪ್ರಭುತ್ವ ಆಡಳಿತವಿದೆ ಎಂಬುದನ್ನು ಎತ್ತಿ ತೋರಿಸುತ್ತದೆ ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ಅವರು ಬುಧವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸಂಪುಟದ ಕೆಲವು ಸಚಿವರ ಕಾರ್ಯವೈಖರಿಯ ಬಗ್ಗೆ ಆಡಳಿತ ಪಕ್ಷದ ಕೆಲವು ಶಾಸಕರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದನ್ನು ಪರೋಕ್ಷವಾಗಿ ಉಲ್ಲೇಖಿಸಿ ಮಾತನಾಡಿದರು.
ಕಾಂಗ್ರೆಸ್ ಸರ್ಕರದಲ್ಲಿ ಯಾರಾದರೂ ತಮ್ಮ ಧ್ವನಿ ಎತ್ತಬಹುದು, ತಮ್ಮ ಬೇಡಿಕೆಗಳನ್ನು ವ್ಯಕ್ತಪಡಿಸಬಹುದು. ಇದು ನರೇಂದ್ರ ಮೋದಿ ಶೈಲಿಯ ಸರ್ವಾಧಿಕಾರಿ ಆಡಳಿತವಲ್ಲ. ಕೆಲವು ಶಾಸಕರು ಕೆಲವು ವಿಷಯಗಳ ಬಗ್ಗೆ ಸಿಎಂ, ಡಿಸಿಎಂ ಮತ್ತು ಸಚಿವರನ್ನೂ ಪ್ರಶ್ನಿಸಿದ್ದಾರೆಂದು ಹೇಳಿದರು.
ಶಾಸಕರು ತಮ್ಮ ಕ್ಷೇತ್ರಗಳಿಗೆ ಅನುದಾನವನ್ನು ಕೋರಿದ್ದಾರೆ. ಅದರಲ್ಲಿ ತಪ್ಪೇನಿದೆ? ಮನೆಯ ಮುಖ್ಯಸ್ಥರ ಮುಂದೆ ಕಳವಳಗಳನ್ನು ವ್ಯಕ್ತಪಡಿಸುವುದು ತಪ್ಪೇ? ಒಳ್ಳೆಯ ಮತ್ತು ಉತ್ತಮ ಪ್ರಜಾಪ್ರಭುತ್ವ ಎಂದರೆ ಹೀಗಿರುತ್ತದೆ. ಇದು ಅತೃಪ್ತಿ ಅಥವಾ ಕೋಪವಲ್ಲ. ಇದು ಒಬ್ಬರ ಬೇಡಿಕೆಗಳನ್ನು ಮಂಡಿಸುವ ಬಗೆಯಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ಕಳವಳಗಳನ್ನು ವ್ಯಕ್ತಪಡಿಸಲು ತಮ್ಮದೇ ಆದ ಮಾರ್ಗವನ್ನು ಹೊಂದಿರುತ್ತಾರೆಂದು ತಿಳಿಸಿದರು.
ಆರ್ಥಿಕವಾಗಿ ನಮ್ಮ ಸರ್ಕಾರ ಸುಭದ್ರವಾಗಿದೆ . ಶಾಸಕರು ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ಕಾಗಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಹತ್ತಿರ ಅನುದಾನ ಕೇಳಿ ಪಡೆಯುತ್ತಿದ್ದಾರೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಹಣದ ಕೊರತೆಯಿಲ್ಲ, ಬಿಜೆಪಿಯವರು ವಿರೋಧಿ ಹೇಳಿಕೆ ನೀಡಬೇಕು ಎಂದು ಸುಮ್ಮನೆ ಹೇಳಿಕೆ ನೀಡುತ್ತಾರೆ. ಅವರ ಅರ್ಥವಿಲ್ಲದ ಆರೋಪಕ್ಕೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.
ಇದೇ ವೇಳೆ ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ. ಹೈಕಮಾಂಡ್ ಹಾಗೂ ರಾಜ್ಯ ವರಿಷ್ಠರು ನೀಡಿದ ಜವಾಬ್ದಾರಿಯನ್ನು ನಿಭಾಯಿಸುವೆ ಎಂದು ಸ್ಪಷ್ಟಪಡಿಸಿದರು.
Advertisement