
ಬೆಂಗಳೂರು: ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆ ಭುಗಿಲೆದ್ದಿದೆ. ಪಕ್ಷದ ಕೆಲವು ಶಾಸಕರು ತಮ್ಮದೇ ಸರ್ಕಾರದ ಕಾರ್ಯವೈಖರಿಯ ವಿರುದ್ಧ ಬಹಿರಂಗವಾಗಿ ಮಾತನಾಡುತ್ತಿದ್ದು ಸಿಎಂ ಸಿದ್ದರಾಮಯ್ಯ ಆಡಳಿತದ ಮೇಲೆ ಹಿಡಿತ ಕಳೆದುಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಈ ಸಂಬಂಧ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ ಶಿವಕುಮಾರ್, ಮಾಧ್ಯಮಗಳು ಈ ವಿಷಯವನ್ನು ಹುರಿದುಂಬಿಸುತ್ತಿವೆ ಎಂದು ಆರೋಪಿಸಿದರು.
ನನಗೆ ಗೊತ್ತಿಲ್ಲ. ನನಗೆ ಅದರ ಬಗ್ಗೆ ತಿಳಿದಿಲ್ಲ. ನಾನು ಅದರ ಬಗ್ಗೆ ಕೇಳಿಲ್ಲ. ಏನೇ ಇರಲಿ, ನನ್ನ ಪಕ್ಷದ ಹೈಕಮಾಂಡ್ ನಾಯಕರು ಬರುತ್ತಾರೆ. ನಾನು ಅವರೆಲ್ಲರೊಟ್ಟಿಗೆ ಮಾತನಾಡುತ್ತೇನೆ ಎಂದು ಶಿವಕುಮಾರ್ ಹೇಳಿದರು. ಮುಖ್ಯಮಂತ್ರಿಗಳು ಆಡಳಿತದ ಮೇಲೆ ನಿಯಂತ್ರಣ ಕಳೆದುಕೊಂಡಿಲ್ಲ. ಹುಸಿ ಸುದ್ದಿಗಳನ್ನು ಮಾಧ್ಯಮಗಳು ಹಬ್ಬಿಸುತ್ತಿವೆ ಎಂದರು.
ವಸತಿ ಇಲಾಖೆಯಲ್ಲಿನ ಸಾರ್ವಜನಿಕ ವಸತಿ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್‌ನ ಆಳಂದ್ ಶಾಸಕ ಬಿ.ಆರ್. ಪಾಟೀಲ್ ಆರೋಪಿಸಿದ್ದರು. ಕಾಗ್ವಾಡ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕ ರಾಜು ಕಾಗೆ, ಅಭಿವೃದ್ಧಿ ಕಾರ್ಯಗಳಲ್ಲಿನ ವಿಳಂಬ ಮತ್ತು ಅನುದಾನ ಬಿಡುಗಡೆಯನ್ನು ಉಲ್ಲೇಖಿಸಿ ರಾಜೀನಾಮೆ ನೀಡುವ ಸುಳಿವು ನೀಡಿದ್ದರು. ಶಾಸಕರ ಬಹಿರಂಗ ಹೇಳಿಕೆಗಳು ಆಡಳಿತಾರೂಢ ಕಾಂಗ್ರೆಸ್ ಅನ್ನು ಮುಜುಗರಕ್ಕೀಡು ಮಾಡಿತ್ತು. ಇನ್ನು ವಿರೋಧ ಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದು ವ್ಯಾಪಕ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮತ್ತು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿವೆ.
ಬುಧವಾರ ಸಂಜೆ ನವದೆಹಲಿಯಿಂದ ವಾಪಸ್ಸಾದ ನಂತರ ಸಿದ್ದರಾಮಯ್ಯ ಅವರು, ಬಿಆರ್ ಪಾಟೀಲ್ ಮತ್ತು ರಾಜು ಕಾಗೆ ಅವರನ್ನು ಭೇಟಿಯಾಗಿ ಸರ್ಕಾರದ ವಿರುದ್ಧ ಸಾರ್ವಜನಿಕ ಹೇಳಿಕೆಗಳನ್ನು ನೀಡದಂತೆ ಸೂಚಿಸಿದ್ದು ತಮ್ಮ ಕುಂದುಕೊರತೆಗಳನ್ನು ಪರಿಶೀಲಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.
ದೆಹಲಿ ಭೇಟಿಯ ಸಮಯದಲ್ಲಿ ಮುಖ್ಯಮಂತ್ರಿಗಳು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿಯಾಗಿ ಚರ್ಚಿಸಿದ್ದರು. ಸಮಸ್ಯೆಗಳನ್ನು ಪರಿಹರಿಸಲು, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಮತ್ತು ಸರ್ಕಾರದ ವಿರುದ್ಧ ಯಾರೂ ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡದಂತೆ ನೋಡಿಕೊಳ್ಳುವಂತೆ ಹೈಕಮಾಂಡ್ ಮುಖ್ಯಮಂತ್ರಿಗೆ ಸೂಚಿಸಿತ್ತು.
Advertisement