
ಬೆಂಗಳೂರು: ಸೆಪ್ಟೆಂಬರ್ನಲ್ಲಿ ಕ್ರಾಂತಿ ನಡೆಯುವ ಬಗ್ಗೆ ಕೆ.ಎನ್.ರಾಜಣ್ಣಗೆ ಮಾಹಿತಿ ಇರಬೇಕು. ಇಲ್ಲದಿದ್ದರೆ ಹಾಗೆ ಹೇಳುತ್ತಿರಲಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ರಾಜಣ್ಣ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜಣ್ಣ ಆ ರೀತಿ ಹೇಳಿದ್ದಾರೆ. ಆದರೆ, ನಮ್ಮ ನನ್ನ ಗಮನಕ್ಕೆ ಯಾವುದೇ ವಿಚಾರ ಬಂದಿಲ್ಲ. ಅವರವರ ಗಮನಕ್ಕೆ ಬಂದಂತೆ ಅವರವರು ಮಾತನಾಡುತ್ತಾರೆ. ರಾಜಣ್ಣಗೆ ಏನಾದರೂ ಸುಳಿವು ಸಿಕ್ಕಿರಬಹುದು ಎಂದರು.
ಸೆಪ್ಟೆಂಬರ್ನಲ್ಲಿ ಕ್ರಾಂತಿಯಾಗುತ್ತೆ ಅಂದಿದ್ದಾರೆ. ಅವರಿಗೆ ಯಾವುದೋ ಮಾಹಿತಿ ಇರಬೇಕು. ಇಲ್ಲದಿದ್ದರೆ ಆ ರೀತಿ ಅವರು ಜವಾಬ್ದಾರಿ ಸ್ಥಾನದಲ್ಲಿ ಇದ್ದು ಹೇಳುತ್ತಿರಲಿಲ್ಲ. ಯಾವ ಕ್ರಾಂತಿ ಅನ್ನೋದನ್ನು ಅವರನ್ನೇ ಕೇಳಿ. ಅದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ" ಎಂದರು.
ಮಂತ್ರಿಗಳ ಬದಲಾವಣೆ ಎಂಬ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, "ಅವರಿಗಿರುವ ಮಾಹಿತಿ ಪ್ರಕಾರ ಹೇಳಿರಬಹುದು. ನನಗೆ ಯಾವುದೇ ಮಾಹಿತಿ ಇಲ್ಲ. ನನಗೆ ತಿಳಿದಂತೆ ಯಾವುದೇ ಬದಲಾವಣೆ ಆಗಲ್ಲ. ಮುಂದೇನಾಗುತ್ತೆ ಅಂತ ಹೇಗೆ ಹೇಳಲು ಸಾಧ್ಯ?. ಮುಂದೇನು ಅಂತ ಹೈಕಮಾಂಡ್ ತೀರ್ಮಾನಿಸುತ್ತದೆ" ಎಂದು ಸ್ಪಷ್ಟಪಡಿಸಿದರು.
ಸಿಎಂ ಗ್ರಿಪ್ ಕಳೆದುಕೊಂಡಿದ್ದಾರೆಂಬ ಆರೋಪ ವಿಚಾರವಾಗಿ ಮಾತನಾಡಿದ ಪರಮೇಶ್ವರ್, "ಸಿಎಂ ಯಾವುದೇ ಗ್ರಿಪ್ ಕಳೆದುಕೊಂಡಿಲ್ಲ. ಸಿಎಂ ಈಗ ಆಡಳಿತ ನಡೆಸ್ತಾ ಇಲ್ವಾ?. ಸಣ್ಣಪುಟ್ಟ ವಿಚಾರಗಳಿರುತ್ತವೆ, ಬಗೆಹರಿಸುತ್ತಾರೆ. ಬಿಜೆಪಿಯವರು ಹಿಂದೆಯೂ ಟೀಕೆ ಮಾಡುತ್ತಿದ್ದರು. ಈಗಲೂ ಮಾಡುತ್ತಾ ಇದ್ದಾರೆ. ಸಿಎಂ ಅವರಿಗೆ ಸ್ವಲ್ಪ ವಯಸ್ಸಾಗಿರಬಹುದು. ಹಾಗಾಗಿ ಅವರು ಸ್ವಲ್ಪ ಸಾಫ್ಟ್ ಆಗಿರಬಹುದು. ಅವರು ಎಲ್ಲಿಯೂ ಗ್ರಿಪ್ ಕಳೆದುಕೊಂಡಿಲ್ಲ" ಎಂದು ಹೇಳಿದರು.
ನಮ್ಮಲ್ಲಿ ಯಾವುದೇ ಪವರ್ ಸೆಂಟರ್ ಇಲ್ಲ. ಇರೋದು ಒಂದೇ ಪವರ್ ಸೆಂಟರ್. ಆಡಳಿತದ ದೃಷ್ಟಿಯಿಂದ ಸಿಎಂ ಪವರ್ ಸೆಂಟರ್. ಪಕ್ಷದ ಅಧ್ಯಕ್ಷರು, ಉಸ್ತುವಾರಿಗಳೂ ಪವರ್ ಸೆಂಟರ್ಗಳೇ. ಎಲ್ಲಕ್ಕಿಂತ ಮಿಗಿಲಾಗಿ ಹೈಕಮಾಂಡ್ ಇದೆ. ಎಲ್ಲವನ್ನೂ ಹೈಕಮಾಂಡ್ ನೋಡಿಕೊಳ್ಳುತ್ತದೆ' ಎಂದರು.
Advertisement