ಸಂವಿಧಾನದಿಂದ 'ಜಾತ್ಯತೀತತೆ - ಸಮಾಜವಾದ' ಕೈ ಬಿಡಬೇಕು: ದತ್ತಾತ್ರೇಯ ಹೊಸಬಾಳೆ ಹೇಳಿಕೆಗೆ CM ಪ್ರತಿಕ್ರಿಯೆ

ಭಾರತೀಯ ಜನತಾಪಕ್ಷ ಮತ್ತು ಅದರ ಮಾತೃಸಂಸ್ಥೆಯಾಗಿರುವ ಆರ್ ಎಸ್ ಎಸ್ ಸಂವಿಧಾನವನ್ನು ಅದರ ರಚನೆಯ ದಿನದಿಂದಲೇ ವಿರೋಧಿಸುತ್ತಾ ಬಂದಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ.
CM Siddaramaiah
ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದಿ’ ಮತ್ತು "ಜಾತ್ಯತೀತ" ಪದಗಳನ್ನು ಕಿತ್ತುಹಾಕಬೇಕೆಂದು ಆರ್ ಎಸ್ ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿರುವುದು ಗಂಭೀರವಾಗಿ ಚರ್ಚೆ ನಡೆಯಬೇಕಾಗಿರುವ ಸಂಗತಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಆಡಳಿತಾರೂಢ ಬಿಜೆಪಿಯ ಹೈಕಮಾಂಡ್ ನಿಂದಲೇ ಈ ಅಭಿಪ್ರಾಯ ವ್ಯಕ್ತವಾಗಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ದೇಶದ ಜನತೆಯ ಮುಂದಿಡಬೇಕೆಂದು 140 ಕೋಟಿ ಜನರ ಪರವಾಗಿ ನಾನು ಪ್ರಧಾನಿ ಅವರನ್ನು ಆಗ್ರಹಿಸುತ್ತೇನೆ ಎಂದಿದ್ದಾರೆ.

ಭಾರತ ಸಮಾಜವಾದಿ ಮತ್ತು ಜಾತ್ಯತೀತ ದೇಶ ಎಂದು ಎಲ್ಲರೂ ಅರ್ಥಮಾಡಿಕೊಂಡಿದ್ದ ಕಾರಣ ಸಂವಿಧಾನದ ಮೂಲಪೀಠಿಕೆಯಲ್ಲಿ ಈ ಪದಗಳನ್ನು ಪ್ರತ್ಯೇಕವಾಗಿ ಸೇರಿಸುವ ಅಗತ್ಯ ಪ್ರಾರಂಭದ ದಿನಗಳಲ್ಲಿ ಬರಲಿಲ್ಲ. ಆದರೆ ನಂತರದ ದಿನಗಳಲ್ಲಿ ಪ್ರಜಾಪ್ರಭುತ್ವದ ಮೂಲ ಆಶಯಗಳಾದ ಜಾತ್ಯತೀತತೆ ಮತ್ತು ಸಮಾಜವಾದದ ಮೇಲೆಯೇ ಆರ್ ಎಸ್ ಎಸ್ ಮತ್ತು ಜನಸಂಘಗಳು ದಾಳಿ ಮಾಡಲು ಶುರುಮಾಡಿದಾಗ ಪ್ರಧಾನಿ ಇಂದಿರಾ ಗಾಂಧಿಯವರು 42ನೇ ತಿದ್ದುಪಡಿ ಮೂಲಕ ಈ ಪದಗಳನ್ನು ಸೇರಿಸಬೇಕಾಯಿತು ಎನ್ನುವುದನ್ನು ಇಡೀ ದೇಶ ಇಂದು ಒಪ್ಪಿಕೊಂಡಿದೆ.

ಸಂವಿಧಾನವನ್ನು ಆರ್ ಎಸ್ ಎಸ್ ವಿರೋಧಿಸುತ್ತಿರುವುದು ಹೊಸ ಬೆಳವಣಿಗೆಯೇನಲ್ಲ. ಭಾರತೀಯ ಜನತಾಪಕ್ಷ ಮತ್ತು ಅದರ ಮಾತೃಸಂಸ್ಥೆಯಾಗಿರುವ ಆರ್ ಎಸ್ ಎಸ್ ಸಂವಿಧಾನವನ್ನು ಅದರ ರಚನೆಯ ದಿನದಿಂದಲೇ ವಿರೋಧಿಸುತ್ತಾ ಬಂದಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನವನ್ನು ದೇಶಕ್ಕೆ ಅರ್ಪಿಸಿದ್ದ ನಾಲ್ಕೇ ದಿನಕ್ಕೆ ಅದನ್ನು ವಿರೋಧಿಸಿ ಆರ್ ಎಸ್ ಎಸ್ ಮುಖವಾಣಿ ಆರ್ಗನೈಸರ್ ಪತ್ರಿಕೆ ಸಂಪಾದಕೀಯವನ್ನು ಬರೆದಿತ್ತು.

ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಭಾರತೀಯತೆಯಾಗಲಿ, ಪುರಾತನ ಭಾರತದ ಕಟ್ಟುಕಟ್ಟಳೆಗಳಾಗಲಿ ಇಲ್ಲ, ಇದೇ ಈ ಸಂವಿಧಾನದ ಅತ್ಯಂತ ಕೆಟ್ಟ ವಿಚಾರ ಎಂದು ಆರ್ಗನೈಸರ್ ಪತ್ರಿಕೆ ಸಂಪಾದಕೀಯ ಬರೆದಿತ್ತು. ಭಾರತದ ಸಂವಿಧಾನ ಎನ್ನುವುದು ಬೇರೆ ದೇಶಗಳ ಸಂವಿಧಾನದ ಕಲಮ್ ಗಳನ್ನು ಹೆಕ್ಕಿತಂದು ಒಟ್ಟುಗೂಡಿಸಿದ ಕಂತೆ, ಅದರಲ್ಲಿ ಭಾರತೀಯತೆಯೇ ಇಲ್ಲ ಎಂದು ಎಂ.ಎಸ್. ಗೋಲ್ವಾಲ್ಕರ್ ಹೇಳಿದ್ದರು. ಮನುಸ್ಮೃತಿಯೇ ನಿಜವಾದ ಹಿಂದೂ ಕಾನೂನು, ಅದೇ ಹಿಂದೂಗಳ ಪೂಜನೀಯ ಗ್ರಂಥ. ಈ ಮನುಸ್ಮೃತಿಯ ಆಶಯಗಳು ಸಂವಿಧಾನದಲ್ಲಿ ಇಲ್ಲ ಎಂದು ವಿ.ಡಿ.ಸಾವರ್ಕರ್ ಹೇಳಿದ್ದರು.

ನಮ್ಮ ಸಂವಿಧಾನದ ಬಗ್ಗೆ ಆರ್ ಎಸ್ ಎಸ್ ಮತ್ತು ಅದರ ನಾಯಕರು ಬಹಿರಂಗವಾಗಿ ವ್ಯಕ್ತಪಡಿಸಿರುವ ಈ ಅಭಿಪ್ರಾಯವನ್ನು ಭಾರತೀಯ ಜನತಾ ಪಕ್ಷ ಇಲ್ಲಿಯ ವರೆಗೆ ತಿರಸ್ಕರಿಸಿಲ್ಲ. ಇದರ ಬದಲಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗೆಲ್ಲ ಒಂದೆಡೆ ಆರ್ ಎಸ್ ಎಸ್ ನಾಯಕರು ಮತ್ತು ಇನ್ನೊಂದೆಡೆ ಬಿಜೆಪಿಯ ಕೆಳಹಂತದ ನಾಯಕರು ಸಂವಿಧಾನ ಬದಲಾವಣೆಯ ಕೂಗು ಹಾಕುತ್ತಾ 'ಟೆಸ್ಟ್ ಡೋಸ್' ಕೊಡುತ್ತಾ ಜನರ ನಾಡಿ ಮಿಡಿತವನ್ನು ಪರೀಕ್ಷಿಸುವ ಪ್ರಯತ್ನ ಮಾಡುತ್ತಿರುತ್ತಾರೆ. ಬಿಜೆಪಿ ಈ ಕಳ್ಳಾಟವನ್ನು ದೇಶದ ಪ್ರಜ್ಞಾವಂತ ಜನ ಅರ್ಥಮಾಡಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ 400 ಸ್ಥಾನಗಳನ್ನು ಗೆದ್ದರೆ ಸಂವಿಧಾನವನ್ನು ಬದಲಾಯಿಸುವುದಾಗಿ ಪಕ್ಷದ ಕೆಲವು ಕೂಗುಮಾರಿಗಳಿಂದ ಘೋಷಣೆ ಮಾಡಿಸಿದ್ದ ಬಿಜೆಪಿ ಅದಕ್ಕೆ ತಕ್ಕ ಉತ್ತರ ಪಡೆದಿದ್ದಾರೆ ಎಂದು ಭಾವಿಸುವೆ. ನಮ್ಮ ನಡುವಿನ ಒಂದಷ್ಟು ಜಾತ್ಯತೀತ ನಿಲುವಿನ ಪಕ್ಷಗಳು ಅಧಿಕಾರದ ಲಾಲಸೆಯಿಂದ ರಾಜಿ ಮಾಡಿಕೊಳ್ಳದೆ ಇದ್ದರೆ ಬಿಜೆಪಿ ಇಂದು ವಿರೋಧಪಕ್ಷದ ಸ್ಥಾನದಲ್ಲಿ ಕೂರಬೇಕಾಗಿತ್ತು. ಇದರ ನಂತರವೂ ಬಿಜೆಪಿ ತನ್ನ ಕುಟಿಲ ಪ್ರಯತ್ನವನ್ನು ಮುಂದುವರಿಸಿರುವುದು ವಿಷಾದನೀಯ. ಈಗಲೂ ಎಚ್ಚೆತ್ತುಕೊಳ್ಳದೆ ತಮ್ಮ ಕುಟಿಲ ಪ್ರಯತ್ನವನ್ನು ಹೀಗೆಯೇ ಮುಂದುವರಿಸಿದರೆ ದೇಶದ ಪ್ರಜಾಪ್ರಭುತ್ವಪ್ರೇಮಿ ಜನ ಬಿಜೆಪಿಗೆ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com