
ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮುಂದಿನ ಎರಡು ಮೂರು ತಿಂಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶ ಸಿಗಬಹುದು ಎಂದು ಕಾಂಗ್ರೆಸ್ ಶಾಸಕ ಎಚ್ಎ ಇಕ್ಬಾಲ್ ಹುಸೇನ್ ಭಾನುವಾರ ಹೇಳಿದ್ದಾರೆ.
ಈ ವರ್ಷದ ಕೊನೆಯಲ್ಲಿ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯಾಗಲಿದೆ ಎನ್ನುವ ಊಹಾಪೋಹಗಳ ನಡುವೆ ಶಿವಕುಮಾರ್ ಅವರ ಆಪ್ತ ಶಾಸಕರೊಬ್ಬರು ಈ ಹೇಳಿಕೆ ನೀಡಿದ್ದಾರೆ.
ಸೆಪ್ಟೆಂಬರ್ ನಂತರ ರಾಜ್ಯದಲ್ಲಿ 'ಕ್ರಾಂತಿಕಾರಿ' ರಾಜಕೀಯ ಬೆಳವಣಿಗೆಗಳ ಬಗ್ಗೆ ಸಹಕಾರ ಸಚಿವ ಕೆಎನ್ ರಾಜಣ್ಣ ಇತ್ತೀಚೆಗೆ ನೀಡಿದ ಹೇಳಿಕೆಯ ನಂತರ ಈ ಸುದ್ದಿ ಮತ್ತೆ ಕೇಳಿಬಂದಿದೆ.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ನಮ್ಮ (ಕಾಂಗ್ರೆಸ್) ಶಕ್ತಿ ಏನೆಂದು ನಿಮಗೆಲ್ಲರಿಗೂ ತಿಳಿದಿದೆ. ಈ ವಿಜಯ ಸಾಧಿಸಲು ಯಾರು ಹೋರಾಟ ಮಾಡಿದರು ಮತ್ತು ಬೆವರು ಸುರಿಸಿ, ಶ್ರಮವಹಿಸಿದರು ಎಂಬುದು ಎಲ್ಲರಿಗೂ ತಿಳಿದಿದೆ. ಅವರ (ಶಿವಕುಮಾರ್) ಕಾರ್ಯತಂತ್ರ ಮತ್ತು ಕಾರ್ಯಕ್ರಮಗಳು ಈಗ ಇತಿಹಾಸ ಎಂದು ತಿಳಿಸಿದರು.
'ನಾನು ಊಹಾಪೋಹಗಳನ್ನು ನಂಬುವುದಿಲ್ಲ. ಹೈಕಮಾಂಡ್ ಪರಿಸ್ಥಿತಿಯ ಬಗ್ಗೆ ತಿಳಿದಿದೆ ಮತ್ತು ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡು ಅವರಿಗೆ ಅವಕಾಶ ನೀಡುತ್ತದೆ ಎಂದು ನಮಗೆ ಸಂಪೂರ್ಣ ವಿಶ್ವಾಸವಿದೆ' ಎಂದು ಅವರು ಹೇಳಿದರು.
ರಾಜ್ಯ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಈ ವರ್ಷ ಮುಖ್ಯಮಂತ್ರಿಯಾಗುತ್ತಾರೆಯೇ ಎಂದು ಕೇಳಿದಾಗ ಹುಸೇನ್, 'ಹೌದು, ನಾನು ಹೇಳುತ್ತಿದ್ದೇನೆ. ಸೆಪ್ಟೆಂಬರ್ ನಂತರ ರಾಜ್ಯದಲ್ಲಿ ಕ್ರಾಂತಿಕಾರಿ ರಾಜಕೀಯ ಬೆಳವಣಿಗೆಗಳಿಗೆ ಕೆಲವು ನಾಯಕರು ಸುಳಿವು ನೀಡುತ್ತಿರುವುದು ಇದನ್ನೇ. ಎರಡರಿಂದ ಮೂರು ತಿಂಗಳೊಳಗೆ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ನಾನು ಕೂಡ ಅದನ್ನೇ ಹೇಳುತ್ತಿದ್ದೇನೆ. ನಾನು ನೇರವಾಗಿ ಮಾತನಾಡುತ್ತಿದ್ದೇನೆ' ಎಂದು ಉತ್ತರಿಸಿದರು.
ಕಾಂಗ್ರೆಸ್ ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬದಲಾವಣೆ ಕೇವಲ ಊಹಾಪೋಹ ಎಂದ ಬಗ್ಗೆ ಕೇಳಿದಾಗ, 2023ರ ವಿಧಾನಸಭಾ ಚುನಾವಣೆಯ ನಂತರ ಸರ್ಕಾರ ರಚನೆಗೆ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ತೆಗೆದುಕೊಂಡಿತು. ಆಗ ನಾವೆಲ್ಲರೂ ದೆಹಲಿಯಲ್ಲಿ ಇದ್ದೆವು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ನಿರ್ಧಾರ ತೆಗೆದುಕೊಂಡರು. ಅದು ಎಲ್ಲರಿಗೂ ತಿಳಿದಿದೆ. ಈಗಲೂ ಅವರೇ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತಾರೆ. ನಾವು ಕಾದು ನೋಡಬೇಕು ಎಂದರು.
Advertisement