
ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಫೋಟಗೊಳ್ಳುತ್ತಿರುವಂತೆಯೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ನಾಳೆ ಪಕ್ಷದ ಶಾಸಕರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಲಿದ್ದಾರೆ. ಸರ್ಕಾರದ ಕಾರ್ಯವೈಖರಿ ವಿರುದ್ಧ ಇತ್ತೀಚಿಗೆ ಅನೇಕ ಶಾಸಕರು ಬಹಿರಂಗವಾಗಿ ಹೇಳಿಕೆ ನೀಡಿದ ಬೆನ್ನಲ್ಲೇ ನಡೆಯುತ್ತಿರುವ ಈ ಸಭೆ ಮಹತ್ವ ಪಡೆದುಕೊಂಡಿದೆ.
ಸೆಪ್ಟೆಂಬರ್ ನಂತರ ರಾಜಕೀಯ ಕ್ರಾಂತಿ: ಸೆಪ್ಟೆಂಬರ್ ನಂತರ ರಾಜ್ಯದಲ್ಲಿ ರಾಜಕೀಯ ಕ್ರಾಂತಿ ನಡೆಯಲಿದೆ ಎಂಬ ಸಹಕಾರ ಸಚಿವ ಕೆ.ಎನ್. ರಾಜಣ್ಣ ಇತ್ತೀಚಿಗೆ ನೀಡಿದ ಹೇಳಿಕೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸೇರಿದಂತೆ ನಾನಾ ಚರ್ಚೆಗಳಿಗೆ ಕಾರಣವಾಗಿರುವಂತೇ ಸಭೆ ನಡೆಯುತ್ತಿದೆ.
ಸಂಪುಟ ಪುನಾರಚಣೆ ಒತ್ತಡ: ಸಂಭಾವ್ಯ ಸಂಪುಟ ಪುನಾರಚನೆ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಕುರಿತು ಪಕ್ಷದೊಳಗೆ ಮಾತುಕತೆ ನಡೆಯುತ್ತಿವೆ. ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ನಲ್ಲಿ ಸಂಪುಟ ಪುನಾರಚನೆಗೆ ಒತ್ತಡ ಹೆಚ್ಚಾಗುತ್ತಿದೆ.
ನಾಳೆ ಖಂಡಿತವಾಗಿಯೂ ಸಭೆ: ಸುರ್ಜೇವಾಲಾ ಸಭೆ ಕುರಿತು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಹೌದು. ನಾಳೆ ಅವರ ಬರ್ತೀದ್ದು, ಖಂಡಿತವಾಗಿಯೂ ಸಭೆ ನಡೆಯಲಿದೆ. ಪ್ರತಿಯೊಬ್ಬರಿಗೂ ಅವರೇ ಮಾಹಿತಿ ನೀಡಲಿದ್ದಾರೆ. ನನಗೂ ಈ ಮಾಹಿತಿ ಸಿಕ್ಕಿದ್ದು, ನಮ್ಮ ಎಲ್ಲಾ ಶಾಸಕರಿಗೂ ತಿಳಿಸಿದ್ದೇನೆ ಎಂದು ಹೇಳಿದರು.
ಸರ್ಕಾರದ ವಿರುದ್ಧವೇ ಬಹಿರಂಗ ಹೇಳಿಕೆ: ಆಳಂದ ಶಾಸಕ ಬಿ.ಆರ್.ಪಾಟೀಲ್ ಇತ್ತೀಚಿಗೆ ವಸತಿ ಇಲಾಖೆಯಲ್ಲಿ ಮನೆ ಮಂಜೂರಾತಿಗೆ ಲಂಚದ ಆರೋಪ ಮಾಡಿದ್ದರು. ಅನುದಾನ ಬಿಡುಗಡೆಯಾಗದೆ ಯಾವುದೇ ಅಭಿವೃದ್ಧಿ ಕಾರ್ಯಾಗಳು ಆಗುತ್ತಿಲ್ಲ ಎಂದು ಕಾಗವಾಡ ಶಾಸಕ ರಾಜು ಕಾಗೆ ರಾಜೀನಾಮೆ ಬೆದರಿಕೆ ಹಾಕಿದ್ದರು. ಅವರ ಬಹಿರಂಗ ಹೇಳಿಕೆಗಳನ್ನು ಅಸ್ತ್ರವಾಗಿ ಬಳಸಿಕೊಂಡ ಬಿಜೆಪಿ ಹಾಗೂ ಜೆಡಿಎಸ್ ಸಿಎಂ ಸಿದ್ದರಾಮಯ್ಯ ಮತ್ತು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ರಾಜೀನಾಮೆಗೆ ಆಗ್ರಹಿಸಿದ್ದವು. ಇದರಿಂದ ಕಾಂಗ್ರೆಸ್ ಮುಜುಗರಕ್ಕೊಳಗಾಯಿತು.
ಸಿದ್ದರಾಮಯ್ಯಗೆ ವರಿಷ್ಠರ ಸೂಚನೆ: ಬುಧವಾರ ಬಿ.ಆರ್. ಪಾಟೀಲ್ ಹಾಗೂ ರಾಜು ಕಾಗೆ ಅವರೊಂದಿಗೆ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ಅವರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಸಮಸ್ಯೆಗಳನ್ನು ಬಗೆಹರಿಸಿ, ಯಾರೊಬ್ಬರು ಸರ್ಕಾರದ ವಿರುದ್ಧ ಹೇಳಿಕೆ ನೀಡದಂತೆ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಪಕ್ಷದ ವರಿಷ್ಠರು ಸಿದ್ದರಾಮಯ್ಯಗೆ ಸೂಚಿಸಿರುವುದಾಗಿ ವರದಿಗಳು ಹೇಳಿವೆ.
Advertisement