
ಬಳ್ಳಾರಿ: ಪಕ್ಷದಿಂದ ಉಚ್ಚಾಟಿತರಾಗಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಮತ್ತೆ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ನನ್ನ ಜೀವ ಇರುವುದೇ ಬಿಜೆಪಿಯಲ್ಲಿ. ಹೀಗಾಗಿ, ನಾನು ಬೇರೆ ಯಾವ ಪಕ್ಷಕ್ಕೂ ಹೋಗುವುದಿಲ್ಲ ಎಂದು ಹೇಳಿದ್ದಾರೆ.
ಕುರುಬ ಸಮುದಾಯದ ಬಿಜೆಪಿ ನಾಯಕರ ಸಭೆಯಲ್ಲಿನ ಒತ್ತಾಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಜೀವ ಇರೋದೇ ಬಿಜೆಪಿಯಲ್ಲಿ. ನೊಡೋಣ, ಕೆಲವರು ಹಿರಿಯರಲ್ಲಿ ಮಾತನಾಡಬೇಕು. ಕುಳಿತು ಚರ್ಚೆ ಮಾಡೋಣ ಎಂದಿದ್ದಾರೆ. ಬಿಜೆಪಿ ಬಿಟ್ಟು ಬೇರೆ ಯಾವ ಪಕ್ಷಕ್ಕೂ ಹೋಗಲ್ಲ. ಬಿಜೆಪಿಗೆ ಹೋಗೇ ಹೋಗುತ್ತೇನೆ. ಅದು ಇಂದು ನಿನ್ನೆಯ ಪಕ್ಷವಲ್ಲ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ದಿವಂಗತ ಅನಂತ್ ಕುಮಾರ್ ಮತ್ತು ನಾನು ಸೇರಿದಂತೆ ಹಲವು ಹಿರಿಯರು ಕಟ್ಟಿದ ಪಕ್ಷ ಎಂದರು.
ಕೆಲವರು ರಕ್ತ ಸುರಿಸಿ ಪಕ್ಷ ಸಂಘಟನೆ ಮಾಡಿದ್ದಾರೆ. ನನ್ನ ಸೈದ್ಧಾಂತಿಕ ಹಿನ್ನೆಲೆಯೂ ಬಿಜೆಪಿ ಬಿಟ್ಟು ಯಾವುದೇ ಪಕ್ಷಕ್ಕೆ ಒಗ್ಗಲ್ಲ. ಹೀಗಾಗಿ, ನಾನು ಬೇರೊಂದು ಪಕ್ಷಕ್ಕೆ ಹೋಗುವ ಪ್ರಮೇಯವೇ ಇಲ್ಲ. ಕೆಲ ಹಿರಿಯರು ಕುಳಿತು ಮಾತಾಡೋಣ ಎಂದಿದ್ದಾರೆ. ನೋಡೋಣ ಮುಂದೇನಾಗುತ್ತೆ ಎಂದು ಹೇಳಿದರು. ಪಕ್ಷಕ್ಕೆ ನನ್ನನ್ನು ಯಾರೋ ಕರೀಬೇಕು, ಕರೀಬಾರದು ಅಂತಾ ಅಲ್ಲ ಹಿರಿಯರು ಚರ್ಚೆ ಮಾಡ್ತಾರೆ. ನನ್ನ ಪಕ್ಷಕ್ಕೆ ಕರೆದುಕೊಳ್ಳುವಲ್ಲಿ ಬಿಜೆಪಿ ಯಾಕೆ ಎಚ್ಚೆತ್ತುಕೊಂಡಿಲ್ಲ ಅಂತಾ ನಾನು ಹೇಳಲ್ಲ ಎಂದ ಅವರು ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದ್ದು ಮುಗಿತು. ಅದರ ಬಗ್ಗೆ ನಾನು ಇನ್ನು ಮೇಲೆ ಮಾತಾಡೋದಿಲ್ಲ ಎಂದರು.
ಸಿಎಂ ಸಿದ್ದರಾಮಯ್ಯ ಮತ್ತು ಅವರ ಸಂಪುಟದ ಸಚಿವರು ಕಾಂಗ್ರೆಸ್ ಸೇರಲು ಆಹ್ವಾನ ನೀಡಿದ್ದರು. ನನಗೆ, ಪುತ್ರನಿಗೆ ಸ್ಥಾನಮಾನ ನೀಡುವುದಾಗಿ ಹೇಳಿದ್ದರು. ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಕೂಡಾ ಆಫರ್ ನೀಡಿದ್ದರು. ಆದರೆ, ನಾನು ಹಿಂದುತ್ವವಾಗಿ. ಸತ್ತರೂ ಹಿಂದುತ್ವ ಬಿಡಲ್ಲ. ಬೇರೆ ಪಕ್ಷ ಸೇರಲ್ಲ ಎಂದು ಈಶ್ವರಪ್ಪ ಅವರು ಹೇಳಿದರು. ರಾಜ್ಯದಲ್ಲಿ ಬಿಜೆಪಿಯ ಖದರ್ ಕುಸಿದಿದೆ. ಪಕ್ಷವನ್ನು ಮತ್ತೆ ಸಂಘಟನೆ ಮಾಡಬೇಕಿದೆ. ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವುದು ಮುಗಿದ ಅಧ್ಯಾಯ. ಬಿಜೆಪಿ ಕುರುಬ ಸಮುದಾಯದ ಸಭೆಯಲ್ಲಿ ನನ್ನನ್ನು ಮತ್ತೆ ಬಿಜೆಪಿಗೆ ಕರೆತರಬೇಕು ಎಂಬ ಒತ್ತಾಯ ಕೇಳಿ ಬಂದಿದೆ ಎಂದರು.
Advertisement