
ಬೆಂಗಳೂರು: ಕುಂಭಮೇಳಕ್ಕೆ ಹೋಗಿ ಬಂದ ಮೇಲೆ ಡಿಕೆ.ಶಿವಕುಮಾರ್ ಅವರಿಗೆ ಬುದ್ಧಿ ಬಂದಿದೆ, ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಹಿಂದುತ್ವದ ಬಗ್ಗೆ ಅರಿವಾಗಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಶನಿವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ ಕುಂಭಮೇಳಕ್ಕೆ ಹೋಗಿದ್ದಾರೆ, ಕೊಯಮತ್ತೂರಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಹಿಂದೆಲ್ಲ ಹಿಂದೂ ವಿರೋಧಿಯಂತೆ ವರ್ತಿಸುತ್ತಿದ್ದ ಡಿಕೆ ಶಿವಕುಮಾರ ಇದೀಗ ಹಿಂದೂತ್ವದ ಜಪ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಪೂರ್ವದ ಕಾಂಗ್ರೆಸ್ಸಿಗರು ಹಿಂದುತ್ವ, ಭಾರತೀಯ ಸಂಸ್ಕೃತಿ ಉಳಿಸಲು ಹೋರಾಟ ಮಾಡಿದ್ದಾರೆ. ಈಗ ಡಿ.ಕೆ. ಶಿವಕುಮಾರ್ ಮಾದರಿಯಾಗಿದ್ದಾರೆಂದು ಹೇಳಿದರು.
ಮೊಘಲರಿಂದಲೇ ಭಾರತೀಯ ಸಂಸ್ಕೃತಿ ಹಾಳಾಗಿದ್ದು. ಭಾರತೀಯ ಸಂಸ್ಕೃತಿ ನಾಶ ಮಾಡಿದ ಬ್ರಿಟಿಷರ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಿತ್ತು. ಸ್ವಾತಂತ್ರ್ಯ ಪೂರ್ವ ಕಾಂಗ್ರೆಸ್ಸಿಗರು ಯಾಕೆ ಹೋರಾಟ ಮಾಡಿದ್ದರು? ಹಳೇ ಕಾಂಗ್ರೆಸ್ಸಿಗರ ರಕ್ತ ಈಗಲೂ ಕೆಲವೊಬ್ಬರ ಬಳಿ ಇದೆ. ಅದರಲ್ಲಿ ಡಿಕೆ ಶಿವಕುಮಾರ್ ಒಬ್ಬರು. ಇದರಿಂದ ಡಿಕೆ ಶಿವಕುಮಾರ ಹೊರಬಂದಿದ್ದಾರೆ. ಈಗ ಅವರು ಅನುಸರಿಸುತ್ತಿರುವ ಮಾರ್ಗವೇ ಹಿಂದುತ್ವ.
ಈಗಿನ ಕಾಂಗ್ರೆಸ್ ನವರ ಬಗ್ಗೆ ನಾನು ಮಾತನಾಡೊಲ್ಲ. ಓಟ್ ಬ್ಯಾಂಕ್ ಗಾಗಿ ಮಾತಾನಾಡುತ್ತಾರೆ. ಸ್ವಂತ ಧರ್ಮವನ್ನ ಅವಮಾನ ಮಾಡುತ್ತಾರೆ. ಡಿಕೆ ಶಿವಕುಮಾರ್ ಪ್ರಯಾಗರಾಜ್‌ಗೆ ಹೋಗಿದ್ದರು. ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರು. ಅದನ್ನು ಕಾಂಗ್ರೆಸ್ ನಾಯಕರೇ ಟೀಕಿಸಿದಾಗ, ಆಕ್ಷೇಪ ವ್ಯಕ್ತಪಡಿಸಿದಾಗ ಡಿಕೆ ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ, 'ಹಿಂದೂವಾಗಿ ಹುಟ್ಟಿದ್ದೇನೆ ಹಿಂದೂ ಆಗಿ ಸಾಯುತ್ತೇನೆ' ಎಂದು ಹೇಳಿದ್ದಾರೆ. ನಾವು ಇದನ್ನೇ ಹಿಂದೂತ್ವ ಅನ್ನೋದು ಎಂದು ತಿಳಿಸಿದರು.
ಹಳೇ ಕಾಂಗ್ರೆಸ್ಸಿಗರ ಮತ್ತು ಮಹಾತ್ಮ ಗಾಂಧಿ ಆತ್ಮಕ್ಕೆ ಡಿಕೆ ಶಿವಕುಮಾರ್ ಮಾದರಿಯಾಗಿದ್ದಾರೆ. ಹಿಂದುತ್ವ ಬಿಜೆಪಿ ಸ್ವತ್ತಲ್ಲಾ, ಹಿಂದುತ್ವ ಬಿಜೆಪಿ ಆಸ್ತಿ ಹೇಗಾಗುತ್ತೆ. ಮಹಾತ್ಮ ಗಾಂಧಿ ಸಹ ಹೇ ರಾಮ್ ಅಂತ ಪ್ರಾಣ ಬಿಟ್ಟಿದ್ದಾರೆ. ಗಾಂಧಿ ಸಮಾಧಿ ಮೇಲೆ ಹೇ ರಾಮ್ ಅಂತಲೇ ಬರೆದಿದೆ, ಹೊರತು ಅಲ್ಲಾ ಹೋ ಅಕ್ಬರ ಅಂತ ಇಲ್ಲ. ಆದರೆ, ಈಗಿರುವ ಹೊಸ ಕಾಂಗ್ರೆಸ್ ನಲ್ಲಿ ಇದು ಇಲ್ಲ. ಕೆಲವರು ಬೇರೆಯವರನ್ನು ಮೆಚ್ಚಿಸಲು ಏನೋನೋ ಮಾತನಾಡುತ್ತಾರೆ. ಡಿಕೆ ಶಿವಕುಮಾರ ಹಿಂದುತ್ವ ಪ್ರತಿಪಾದನೆ ನಿಜವೋ, ನಾಟಕನೋ ಏನೋ ಗೊತ್ತಿಲ್ಲ. ಅದನ್ನ ದೇವರು ನೋಡಿಕೊಳ್ಳುತ್ತಾನೆ. ಆದರೆ, ತಾನು ಹಿಂದೂ, ಹಿಂದೂ ಆಗಿಯೇ ಸಾಯುತ್ತೇನೆ ಎಂದಿದ್ದಾರಲ್ಲ ಅದಷ್ಟೇ ಮುಖ್ಯ. ಯಾವ ದೇವರಿಗಾದರೂ ಪೂಜೆ ಮಾಡು, ಒಂದೇ ದೇವರಿಗೆ ಹೋಗುತ್ತೆ. ಹಿಂದುತ್ವ ವಿರುದ್ಧ ಇರುವ ವ್ಯಕ್ತಿ, ಪಕ್ಷಗಳು ದೇಶದಲ್ಲಿ ನಿರ್ನಾಮ ಆಗುತ್ತಿದೆ ಎಂದರು.
ಇದೇ ವೇಳೆ 'ಲವ್ ಜಿಹಾದ್' ಕುರಿತು ಪುಸ್ತಕ ಬಿಡುಗಡೆ ಮಾಡಲು ಶಿವಮೊಗ್ಗ ಜಿಲ್ಲೆಗೆ ಆಗಮಿಸಬೇಕಿದ್ದ ಶ್ರೀರಾಮಸೇನೆ ನಾಯಕ ಪ್ರಮೋದ್ ಮುತಾಲಿಕ್ ಅವರ ಪ್ರವೇಶಕ್ಕೆ ನಿಷೇಧ ಹೇರಿದ್ದಕ್ಕೆ ಪ್ರತಿಕ್ರಿಯಿಸಿ, ಸರ್ಕಾರ ನಡೆಸುತ್ತಿರುವ ನಾಯಕರು ಲವ್ ಜಿಹಾದ್ ತೀವ್ರತೆಯ ಬಗ್ಗೆ ಅರ್ಥ ಮಾಡಿಕೊಳ್ಳದೇ ಇರುವುದು ದುರಾದೃಷ್ಟಕರ ಸಂಗತಿ. ಅವರದ್ದೇ ಕುಟುಂಬದ ಸದಸ್ಯರೊಬ್ಬರು ಇದಕ್ಕೆ ಬಲಿಯಾದಾಗ ಅರಿವಾಗುತ್ತದೆ ಎಂದು ಕಿಡಿಕಾರಿದರು.
ಇದಕ್ಕೂ ಮೊದಲು, ಕ್ರಾಂತಿವೀರ ಬ್ರಿಗೇಡ್ ಅನ್ನು ಸಂಘಟಿಸುವ ಬಗ್ಗೆ ಮಾತನಾಡಿದ ಈಶ್ವರಪ್ಪ, ಹಿಂದೂಗಳ ಎಲ್ಲಾ ಜಾತಿ ಮತ್ತು ಪಂಗಡಗಳ ಮೇಲಿನ ಅನ್ಯಾಯದ ವಿರುದ್ಧ ಹೋರಾಡಲು ಮತ್ತು ಎಲ್ಲಾ ಹಿಂದೂಗಳನ್ನು ಒಂದೇ ಸೂರಿನಡಿ ತರಲು ಈ ವೇದಿಕೆಯನ್ನು ನಿರ್ಮಿಸಲಾಗುತ್ತಿದ್ದು, ಇದಕ್ಕೆ ಎಲ್ಲಾ ಸಮುದಾಯಗಳ ಮಠಾಧೀಶರು ಮತ್ತು ಧಾರ್ಮಿಕ ಮುಖಂಡರಿಂದ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿದರು.
ಯಾವುದೇ ದೊಡ್ಡ ಧಾರ್ಮಿಕ ಸಂಸ್ಥೆಗಳು ಅಥವಾ ಪ್ರಸಿದ್ಧ ಸ್ವಾಮೀಜಿಗಳು ನನ್ನೊಂದಿಗೆ ಇಲ್ಲ, ನನ್ನ ಉದ್ದೇಶವು ಉದಾತ್ತವಾಗಿರುವುದರಿಂದ ಅವರೆಲ್ಲರ ಬೆಂಬಲ ಸಿಗುವ ವಿಶ್ವಾಸವಿದೆ ಎಂದು ತಿಳಿಸಿದರು.
ಇದೇ ವೇಳೆ ಈಶ್ವರಪ್ಪ ಅವರ ನಡೆ ಒಂದು ನಿರ್ದಿಷ್ಟ ಧರ್ಮದ ವಿರುದ್ಧವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಅವರು, ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಹಿಂದೂಗಳೇ ಎಂದು ನಾನು ನಂಬುತ್ತೇನೆ. ರಾಷ್ಟ್ರದ ಬಗ್ಗೆ ಪ್ರೀತಿ ಹೊಂದಿರುವ ಮತ್ತು ನೀತಿವಂತರಾಗಿರುವ ಎಲ್ಲರೂ ನಮ್ಮ ಅಭಿಯಾನದಲ್ಲಿ ಪಾಲ್ಗೊಳ್ಳಬಹುದು. ನಮ್ಮ ನಡೆ ಯಾವುದೇ ಧರ್ಮದ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸಿದರು.
Advertisement