ತಮ್ಮ ತಪ್ಪು ಮುಚ್ಚಿಕೊಳ್ಳಲು ಕ್ಷೇತ್ರ ಮರುವಿಂಗಡಣೆ ಕುರಿತು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ: ಸಿದ್ದು ವಿರುದ್ಧ ಬೊಮ್ಮಾಯಿ ಕಿಡಿ

ಸಿದ್ದರಾಮಯ್ಯ ಅವರು ತಾವು ಮುಖ್ಯಮಂತ್ರಿಯಾಗಿ ವಿಫಲರಾಗಿರುವುದನ್ನು ಮುಚ್ಚಿಕೊಳ್ಳಲು ಯಾವುದಾದರೂ ವಿಷಯದ ಮಧ್ಯದಲ್ಲಿ ತಪ್ಪು ಹುಡುಕುವ ಕೆಲಸ ಮಾಡುತ್ತಾರೆ.
Basavaraj Bommai
ಬಸವರಾಜ ಬೊಮ್ಮಾಯಿ
Updated on

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಕ್ಷೇತ್ರ ಮರು ವಿಂಗಡಣೆ ಕುರಿತು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಅವರು ಮುಖ್ಯಮಂತ್ರಿಯಾಗಿ ಇದನ್ನು ರಾಜಕೀಯ ಗೊಳಿಸುತ್ತಿರುವುದು ದುರಾದೃಷ್ಟಕರ ಸಂಗತಿ. ಇದು ರಾಜ್ಯಕ್ಕೆ ಒಳ್ಳೆಯದಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿಯವರು ಶುಕ್ರವಾರ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ತಾವು ಮುಖ್ಯಮಂತ್ರಿಯಾಗಿ ವಿಫಲರಾಗಿರುವುದನ್ನು ಮುಚ್ಚಿಕೊಳ್ಳಲು ಯಾವುದಾದರೂ ವಿಷಯದ ಮಧ್ಯದಲ್ಲಿ ತಪ್ಪು ಹುಡುಕುವ ಕೆಲಸ ಮಾಡುತ್ತಾರೆ. ಕರ್ನಾಟಕ ದಿವಾಳಿ ಅಂಚಿನಲ್ಲಿದ್ದು, ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಎಸ್ಸಿ ಎಸ್ಟಿಗೆ ಮೀಸಲಿಟ್ಟಿದ್ದ ಹಣ ದುರುಪಯೋಗ ಆಗಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದೆ ಎಂದು ಹೇಳಿದರು.

ಕ್ಷೇತ್ರ ಮರುವಿಂಗಡನೆ ಸಂಸತ್ತಿನ ಮೂರನೇ ಎರಡರಷ್ಟು ಬಹುಮತದೊಂದಿಗೆ ಆಗತ್ತದೆ. ಒಂದೇ ರಾತ್ರಿಗೆ ಆಗುವುದಿಲ್ಲ. ಕ್ಷೇತ್ರ ಮರುವಿಂಗಡನೆ ಮಾಡಲು ಸಂವಿಧಾನ ಬದ್ದ ಸಮಿತಿ ಇದೆ. ಅಲ್ಲದೇ ಪ್ರಧಾನಿ ಮೋದಿ ಅವರು ಯಾವುದೇ ರಾಜ್ಯಕ್ಕೂ ಅನ್ಯಾಯ ಆಗುವುದಿಲ್ಲ ಎಂದು ಸಂಸತ್ತಿನಲ್ಲಿಯೇ ಸ್ಪಷ್ಟ ಪಡಿಸಿದ್ದಾರೆ. ಆದರೂ ಏನಾದರೂ ತಪ್ಪು ಹುಡುಕಿ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಾಗಿ ಇದನ್ನು ರಾಜಕೀಯ ಗೊಳಿಸುತ್ತಿರುವುದು ದುರಾದೃಷ್ಟ ಇದು ರಾಜ್ಯಕ್ಕೆ ಒಳ್ಳೆಯದಲ್ಲ ಎಂದು ತಿಳಿಸಿದರು.

ದೇಶದ ಜನರು ವಿಕಸಿತ ಆದಾಗ ಮಾತ್ರ ದೇಶ ವಿಕಸಿತ ಆಗಲಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಆಡಳಿತ ಮಾಡುವವರ ಜೇಬು ತುಂಬಿತ್ತು. ಜನರ ಜೇಬು ಖಾಲಿ ಇತ್ತು. ನರೇಂದ್ರ ಮೋದಿ ಯವರು ಪ್ರಧಾನಿ ಆದಮೇಲೆ 25 ಕೋಟಿ ಜನರು ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಅತ್ಯಂತ ಕಡಿಮೆ ಜನರು ಒಂದು ಕೋಟಿ ರೂ. ಆದಾಯ ತೆರಿಗೆ ಕಟ್ಟುತ್ತಿದ್ದರು. ಈಗ ನಾಲ್ಕು ಲಕ್ಷ ಜನರು ಒಂದು ಕೋಟಿ ರೂ. ಆದಾಯ ತೆರಿಗೆ ಕಟ್ಟುತ್ತಿದ್ದಾರೆ. ಭಾರತ ವಿಕಸಿತ ಆಗುತ್ತಿದೆ ಎನ್ನುವುದು ಭಾರತೀಯರಿಗೂ ಅನಿಸುತ್ತಿದೆ. ವಿದೇಶಿಯರಿಗೂ ಅನಿಸುತ್ತಿದೆ. ಶೇ 6.5 ಜಿಡಿಪಿ ಅಭಿವೃದ್ಧಿ ಆಗುತ್ತಿರುವುದು ಬೇರೆ ಯಾವುದೇ ದೇಶದಲ್ಲಿ ಆಗುತ್ತಿಲ್ಲ. ಕಾಂಗ್ರೆಸ್ ಮತ್ತು ಅದರ ಅಧ್ಯಕ್ಷರಿಗೆ ಕಾಂಗ್ರೆಸ್ ಅಭಿವೃದ್ಧಿ ಆದರೆ ಮಾತ್ರವೇ ದೇಶದ ಅಭಿವೃದ್ಧಿ ಎಂದುಕೊಂಡಿದ್ದಾರೆ ಎಂದರು.

ಬಡವರು, ದಲಿತರು, ಯುವಕರು, ಹೆಣ್ಣು ಮಕ್ಕಳು ಎಲ್ಲ ರಂಗದಲ್ಲಿಯೂ ಅಭಿವೃದ್ಧಿ ಆಗುತ್ತಿದೆ. ಎಲ್ಲರೂ ಮುಂದೆ ಬರುತ್ತಿದ್ದಾರೆ. ವಿಕಸಿತ ಭಾರತ ಕಲ್ಪನೆ ಈಗ ಸಾಕಾರಗೊಳ್ಳುತ್ತಿದೆ. ಇದಕ್ಕೆ ಎಲ್ಲರೂ ಕೈಜೋಡಿಸುತ್ತಿದ್ದಾರೆ. ಇದನ್ನು ಕಾಂಗ್ರೆಸ್ ನವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಕಿಡಿಕಾರಿದರು.

Basavaraj Bommai
ರಾಜ್ಯದ ಆರ್ಥಿಕ ಸ್ಥಿತಿ ದಯನೀಯ ಸ್ಥಿತಿಯಲ್ಲಿದೆ: ಬೊಮ್ಮಾಯಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com