
ಬೆಂಗಳೂರು: ಇಶಾ ಕಾರ್ಯಕ್ರಮಕ್ಕೆ ಹಾಜರಾಗುವುದಾಗಿ ಡಿಕೆ ಶಿವಕುಮಾರ್ ಅವರು ಹೈಕಮಾಂಡ್‌ಗೆ ಮಾಹಿತಿ ನೀಡಿದ್ದರು ಎಂದು ಬೆಂಗಳೂರು ಗ್ರಾಮಾಂತರ ಮಾಜಿ ಸಂಸದ ಡಿಕೆ ಸುರೇಶ್ ಅವರು ಶನಿವಾರ ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ದೊಡ್ಡಬಳ್ಳಾಪುರದ ಬಳಿಯಿರುವ ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಿವರಾತ್ರಿಯ ಕಾರ್ಯಕ್ರಮದಲ್ಲಿ ಡಿಕೆಶಿ ಅವರು ಕೇಂದ್ರ ಸಚಿವ ಅಮಿತ್ ಶಾ ಜೊತೆಗೆ ವೇದಿಕೆ ಹಂಚಿಕೊಂಡಿದ್ದು ರಾಜಕೀಯವಾಗಿ ಭಾರೀ ಸದ್ದು ಮಾಡುತ್ತಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿ.ಕೆ.ಸುರೇಶ್ ಅವರು, ಡಿಕೆ.ಶಿವಕುಮಾರ್ ಯಾರನ್ನೂ ರಹಸ್ಯವಾಗಿ ಭೇಟಿ ಮಾಡಿಲ್ಲ. ಈಶಾ ಕಾರ್ಯಕ್ರಮಕ್ಕೆ ಹಾಜರಾಗುವುದಾಗಿ ಹೈಕಮಾಂಡ್‌ಗೆ ಮಾಹಿತಿ ನೀಡಿದ್ದರು. ಪ್ರಧಾನಿ ಮೋದಿಯವರನ್ನು ಭೇಟಿಯಾದಾಗಲೂ ಹೈಕಮಾಂಡ್‌ಗೆ ಮಾಹಿತಿ ನೀಡಿದ್ದರು. ಅವರು ರಹಸ್ಯವಾಗಿ ಹೋಗಲಿಲ್ಲ, ಸಾರ್ವಜನಿಕವಾಗಿ ಹೋಗಿದ್ದಾರೆ. ಸದ್ಗುರು ಡಿಕೆ.ಶಿವಕುಮಾರ್ ಅವರ ಮನೆಗೆ ಬಂದು ಆಹ್ವಾನಿಸಿದ್ದರು. ಅವರ ಆಹ್ವಾನವನ್ನು ಸ್ವೀಕರಿಸಿ ಕಾರ್ಯಕ್ರಮಕ್ಕೆ ಹೋಗಿದ್ದಾರೆಂದು ಹೇಳಿದರು.
ಶಿವಕುಮಾರ್ ಮೊದಲಿನಿಂದಲೂ ನಾಸ್ತಿಕರು.ಶಿವಕುಮಾರ್ ಎಂದು ಹೆಸರು ಬಂದಿದ್ದೆ ಶಿವನ ಹರಕೆಯಿಂದ. ಅವರು ಜನಿಸಿದ ಕಾರಣ ನಮ್ಮ ತಂದೆ- ತಾಯಿ ಅವರಿಗೆ ಶಿವಕುಮಾರ್ ಎಂದು ಹೆಸರಿಟ್ಟರು. ಮಗು ಜನಿಸಬೇಕು ಎಂದು ನಮ್ಮ ಅಪ್ಪ ಅಮ್ಮ ದೇವರಿಗೆ ಪ್ರತಿ ವರ್ಷ ಪ್ರಾರ್ಥನೆ ಮಾಡುತ್ತಿದ್ದರು. ನಮ್ಮ ತಂದೆ ನಿತ್ಯ ಶಿವನ ದೇವಾಲಯಕ್ಕೆ ಹೋಗದೆ ಕೆಲಸ ಆರಂಭಿಸುತ್ತಿರಲಿಲ್ಲ. ನಾನು ಹಾಗೂ ಶಿವಕುಮಾರ್ ಅವಕಾಶ ಸಿಕ್ಕಾಗೆಲ್ಲ ಶಿವನ ದೇವಾಲಯಕ್ಕೆ ಹೋಗುತ್ತೇವೆ. ಕಳೆದ 35 ವರ್ಷಗಳಿಂದ ರಾಜ್ಯ ಹಾಗೂ ರಾಷ್ಟ್ರದಲ್ಲಿರುವ ಧಾರ್ಮಿಕ ಕೇಂದ್ರಗಳಿಗೆ ನಿರಂತರವಾಗಿ ಭೇಟಿ ನೀಡುತ್ತಲೇ ಬಂದಿದ್ದಾರೆ. ಈಗ ಮಾಧ್ಯಮಗಳಿರುವ ಕಾರಣ ದೇವಾಲಯ ಭೇಟಿ ಬಗ್ಗೆ ಪ್ರಚಾರ ಆಗುತ್ತಿದೆ. ಅವರು ಕೊಲ್ಲೂರು, ಕುಕ್ಕೆ ಸುಬ್ರಹ್ಮಣ್ಯ ಹಾಗೂ ವರ್ಷಕ್ಕೆ ಎರಡು ಮೂರು ಬಾರಿ ಧರ್ಮಸ್ಥಳಕ್ಕೆ ಹೋಗುತ್ತಾರೆ. ಇದರ ಜತೆಗೆ ಶೃಂಗೇರಿ ಮಠ, ಕೇರಳ, ತಮಿಳುನಾಡು, ಉತ್ತರ ಭಾರತದ ದೇವಾಲಯಕ್ಕೆ ಹೋಗುತ್ತಾರೆ. ಇದರಲ್ಲಿ ವಿಶೇಷ ಅರ್ಥವಿಲ್ಲ. ಒಬ್ಬ ಹಿಂದೂವಾಗಿ ತನ್ನ ಸಂಸ್ಕೃತಿ, ಸಂಸ್ಕಾರ ಪಾಲಿಸುತ್ತಿದ್ದಾರೆ ಎಂದು ತಿಳಿಸಿದರು.
Advertisement