ಸದ್ಗುರು ಉತ್ತಮ ಕೆಲಸ ಮಾಡುತ್ತಿದ್ದಾರೆ, ನನ್ನ ವೈಯಕ್ತಿಕ ನಂಬಿಕೆ ಮೇಲೆ ಇಶಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಭಾಗಿಯಾದೆ: ಡಿ.ಕೆ ಶಿವಕುಮಾರ್
ಬೆಂಗಳೂರು: ಮಹಾಶಿವರಾತ್ರಿ ದಿನ ಇಶಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಸದ್ಗುರು ಜಗ್ಗಿ ವಾಸುದೇವ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆ ವೇದಿಕೆ ಹಂಚಿಕೊಂಡ ಬಗ್ಗೆ ಕೇಳಿಬಂದಿರುವ ಟೀಕೆಗಳಿಗೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ಬೆಳಗ್ಗೆ ತಮ್ಮ ನಿವಾಸದ ಹೊರಗೆ ಮಾಧ್ಯಮ ಪ್ರತಿನಿಧಿಗಳಿಗೆ ಉತ್ತರಿಸಿದ ಡಿ ಕೆ ಶಿವಕುಮಾರ್, ಸದ್ಗುರುಗಳು ಕರ್ನಾಟಕದವರು. ಅವರು ಕಾವೇರಿ ನೀರಿನ ಕಾರಣಕ್ಕಾಗಿ ಹೋರಾಡುತ್ತಿದ್ದಾರೆ. ಅವರು ಬಂದು ನನ್ನನ್ನು ವೈಯಕ್ತಿಕವಾಗಿ ಆಹ್ವಾನಿಸಿದರು. ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಅವರು ಕೆಲವು ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ವಿವಿಧ ರಾಜಕೀಯ ಪಕ್ಷಗಳ ಶಾಸಕರು ಮತ್ತು ನಾಯಕರು ಅಲ್ಲಿ ಸೇರಿದ್ದರು. ನನ್ನ ವೈಯಕ್ತಿಕ ನಂಬಿಕೆ ಮೇಲೆ ನಾನು ಹೋಗಿ ಕಾರ್ಯಕ್ರಮದಲ್ಲಿ ಭಾಗಿಯಾದೆ ಎಂದರು.
ನನ್ನ ಕ್ಷೇತ್ರದಲ್ಲಿ, ಸುಮಾರು 100 ಅಡಿ ಎತ್ತರದ ಯೇಸುಕ್ರಿಸ್ತನ ಪ್ರತಿಮೆಯನ್ನು ಸ್ಥಳೀಯ ಕ್ಷೇತ್ರದ ಜನರು ನಿರ್ಮಿಸಿದರು. ಆಗ ಬಿಜೆಪಿ ನನ್ನನ್ನು 'ಯೇಸುಕುಮಾರ' ಎಂದು ಕರೆದರು. ನಾನು ಎಲ್ಲಾ ಧರ್ಮಗಳಲ್ಲಿ, ಎಲ್ಲಾ ಜಾತಿಗಳಲ್ಲಿ ನಂಬಿಕೆ ಇಟ್ಟಿರುವವನು. ಸಮಾಜದಲ್ಲಿರುವ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವುದು ಕಾಂಗ್ರೆಸ್ ಪಕ್ಷದ ಸಿದ್ಧಾಂತ. ಭಿನ್ನತೆಯಲ್ಲಿ ಏಕತೆಯನ್ನು ನಾನು ಕಾಣುತ್ತೇನೆ. ಇದು ಕೆಲವರಿಗೆ ಇಷ್ಟವಾಗಬಹುದು, ಇನ್ನು ಕೆಲವರಿಗೆ ಇಷ್ಟವಾಗದಿರಬಹುದು ಎಂದರು.
ಮೊದಲು ಬಿಜೆಪಿಯವರು ತಮ್ಮ ಮನೆಯನ್ನು ಕ್ರಮವಾಗಿ ಇಟ್ಟುಕೊಳ್ಳುವುದನ್ನು ನೋಡಲಿ. ಕಾಂಗ್ರೆಸ್ ನ ಕೆಲವು ಶಾಸಕರು ಹೇಳಿರುವಂತೆ ಹಲವಾರು ಬಿಜೆಪಿ ಶಾಸಕರು ನಮ್ಮೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ನಾನು ಆ ಬಗ್ಗೆ ಚರ್ಚಿಸಲು ಬಯಸುವುದಿಲ್ಲ. ಬಿಜೆಪಿ ಮುರಿದ ಮನೆಯಾಗಿದ್ದರೆ ಕಾಂಗ್ರೆಸ್ ಒಗ್ಗಟ್ಟಿನ ಮನೆ ಎಂದರು.
ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಕ್ಷೇತ್ರ ಪುನರ್ವಿಂಗಡಣೆಯನ್ನು ವಿರೋಧಿಸುತ್ತಿರುವ ಬಗ್ಗೆ ಮಾತನಾಡಿದ ಡಿ ಕೆ ಶಿವಕುಮಾರ್, ಕಾಂಗ್ರೆಸ್ ಪಕ್ಷವು ಕ್ಷೇತ್ರ ಪುನರ್ವಿಂಗಡಣೆಯನ್ನು ಸಂಪೂರ್ಣವಾಗಿ ವಿರೋಧಿಸುತ್ತದೆ. ಕೇಂದ್ರ ಸರ್ಕಾರ ದಕ್ಷಿಣದಲ್ಲಿ ನಮ್ಮ ಸಂಖ್ಯೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ನಾವು ಒಗ್ಗಟ್ಟಿನಿಂದ ನಿಲ್ಲುತ್ತೇವೆ ಮತ್ತು ಒಗ್ಗಟ್ಟಿನಿಂದ ಹೋರಾಡುತ್ತೇವೆ. ನಮ್ಮ ಸ್ಥಾನಮಾನ ಹಾಗೆಯೇ ಇರಬೇಕೆಂದು ನಾವು ಬಯಸುತ್ತೇವೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ