
ಉಡುಪಿ: ರಾಜ್ಯದಲ್ಲಿ ಸಿಎಂ ಹುದ್ದೆ ಹಗ್ಗಜಗ್ಗಾಟ ಮುಂದುವರೆದಿದೆ. ಈ ಮಧ್ಯೆ ಕಾಂಗ್ರೆಸ್ ನಾಯಕರೇ ಡಿಕೆ ಶಿವಕುಮಾರ್ ಸಿಎಂ ಹಾಗೇ ಆಗುತ್ತಾರೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕಾರ್ಕಳದಲ್ಲಿ ಮಾಜಿ ಸಿಎಂ ವೀರಪ್ಪ ಮೊಯ್ಲಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಕಾರ್ಕಳದಲ್ಲಿ ನಡೆದ ಕಾಂಗ್ರೆಸ್ ಕುಟುಂಬೋತ್ಸವದಲ್ಲಿ ವೀರಪ್ಪ ಮೊಯ್ಲಿ ಅವರು ಡಿಸಿಎಂ ಡಿಕೆಶಿ ಸಮ್ಮುಖದಲ್ಲಿಯೇ ಈ ಹೇಳಿಕೆ ನೀಡಿದ್ದಾರೆ. ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವುದು ತೀರ್ಮಾನ ಆಗಿರುವ ವಿಷಯ. ಮೊದಲು ಡಿಕೆ ಶಿವಕುಮಾರ್ ಗೆ MLA ಟಿಕೆಟ್ ಕೊಡಿಸಿದ್ದು ನಾನೇ. ಈಗ ಅವರು ಪಕ್ಷದಲ್ಲಿ ಯಶಸ್ವಿ ನಾಯಕರಾಗಿ ಬೆಳೆದಿರುವುದು ಖುಷಿಯ ಸಂಗತಿ ಎಂದರು. ವಿನಃ ಕಾರಣ ನೀವು ಯಾವುದಕ್ಕೂ ಪ್ರತಿಕ್ರಿಯೆ ಕೊಡಬೇಡಿ. ನಿಮ್ಮ ವಿರುದ್ಧ ಹೇಳಿಕೆಗಳು ಬರುತ್ತೆ ಹೋಗುತ್ತೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ವೀರಪ್ಪ ಮೊಯ್ಲಿ ಸಲಹೆ ನೀಡಿದ್ದಾರೆ.
ಡಿಕೆ ಶಿವಕುಮಾರ್ ಸಿಎಂ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಯಾರೂ ಕೂಡ ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ. ಸಿಎಂ ಹುದ್ದೆ ಯಾರೂ ಕೊಡುವ ವರ ಅಲ್ಲ. ಅದು ಡಿ.ಕೆ ಶಿವಕುಮಾರ್ ಸಂಪಾದನೆ ಮಾಡಿರುವ ಶಕ್ತಿ. ಈ ಪುಣ್ಯ ಭೂವಿಯಲ್ಲಿ ಆಡಿದ ಮಾತು ನೂರಕ್ಕೆ ನೂರು ಸತ್ಯ. ಕೋಟಿ ಕೋಟಿ ಪ್ರಯತ್ನ ಮಾಡಿದರೂ ಡಿಕೆಶಿಗೆ ಸಿಎಂ ಹುದ್ದೆ ತಪ್ಪಿಸಲು ಆಗುವುದಿಲ್ಲ ಎಂದು ವೀರಪ್ಪ ಮೊಯ್ಲಿ ಭವಿಷ್ಯ ನುಡಿದಿದ್ದಾರೆ.
Advertisement