
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ನೇಮಕಾತಿ ಕರ್ಮಕಾಂಡ ಪ್ರಕರಣವು ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಗಳವಾರ ಪ್ರತಿಧ್ವನಿಸಿದ್ದು, ವಿಪಕ್ಷ ಬಿಜೆಪಿಯು ಕೆಪಿಎಸ್‌ಸಿಯದ್ದು ಎನ್ನಲಾದ “ರೇಟ್ ಕಾರ್ಡ್’ ಬಿಡುಗಡೆ ಮಾಡಿತು.
ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್‌ಸಿ) ವ್ಯಾಪಕ ಭ್ರಷ್ಟಾಚಾರ ಮತ್ತು ದೀರ್ಘಕಾಲಿಕ ಅಕ್ರಮಗಳನ್ನು ತಡೆಯಲು ವಿರೋಧ ಪಕ್ಷ ಬಿಜೆಪಿ ಮತ್ತು ಆಡಳಿತಾರೂಢ ಕಾಂಗ್ರೆಸ್ ಮುಂದಾಗಿವೆ. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ, ಕೆಪಿಎಸ್ ಸಿಯಲ್ಲಿ ಅಧಿಕಾರಿಗಳ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವಾಗ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಅಂಶವನ್ನು ಒಪ್ಪಿಕೊಂಡಿವೆ.
ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರ ಪ್ರಶ್ನೆಗೆ ಉತ್ತರಿಸಿದ ಆರ್‌ಡಿಪಿಆರ್ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಕೆಪಿಎಸ್‌ಸಿಯನ್ನು ಸುಧಾರಿಸಲು ಸರ್ಕಾರ ಎರಡು ಸುತ್ತಿನ ಸಭೆಗಳನ್ನು ನಡೆಸಿದೆ ಎಂದು ಹೇಳಿದರು.
ವಿಷಯ ಪ್ರಸ್ತಾವಿಸಿದ ವಿಪಕ್ಷ ನಾಯಕ ಆರ್. ಅಶೋಕ್, ಪೂರ್ವಭಾವಿ ಪರೀಕ್ಷೆಯಿಂದ ಅಂತಿಮ ಸಂದರ್ಶನದ ವರೆಗೆ ಕೆಪಿಎಸ್‌ಸಿಯಲ್ಲಿ, “ರೇಟ್ ಕಾರ್ಡ್’ ನಿಗದಿ ಮಾಡಲಾಗಿದ್ದು, “ಹರಾಜು ಪ್ರಕ್ರಿಯೆ’ಯ ರೀತಿ ಕೋಟ್ಯಂತರ ರೂ.ಗಳಿಗೆ ಹುದ್ದೆಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಆಪಾದಿಸಿದರು.
ಕೆಪಿಎಸ್‌ಸಿಯಲ್ಲಿ ಪ್ರತಿಯೊಂದಕ್ಕೂ ದರ ನಿಗದಿ ಮಾಡಲಾಗಿದೆ. ಪೂರ್ವಭಾವಿ ಪರೀಕ್ಷೆಗೆ 60 ಲಕ್ಷ ರೂ., ಮುಖ್ಯ ಪರೀಕ್ಷೆಗೆ ಒಂದು ಕೋಟಿ ರೂ. ನಿಗದಿ ಮಾಡಲಾಗಿದೆ. ಕೆಪಿಎಸ್‌ಸಿಯಲ್ಲಿ 14 ಸದಸ್ಯರಿದ್ದು, ಒಬ್ಬರಿಗೆ ಎರಡೂವರೆ ಲಕ್ಷ ರೂ. ವೇತನವಿದೆ. ಉಳಿದ ಸೌಲಭ್ಯಗಳ ಸಹಿತ 4 ಲಕ್ಷ ರೂ. ಆಗುತ್ತದೆ. ಕರ್ನಾಟಕದಲ್ಲಿ ಆರೂವರೆ ಕೋಟಿ ಜನರಿದ್ದಾರೆ. 20 ಕೋಟಿ ಜನರಿರುವ ಉತ್ತರಪ್ರದೇಶದ ಆಯೋಗದಲ್ಲಿ 8 ಸದಸ್ಯರಿದ್ದಾರೆ.
ಇದರಲ್ಲೂ ರಾಜ್ಯದಲ್ಲಿ ಹಗಲು ದರೋಡೆ ನಡೆಯುತ್ತಿದೆ. ಸಹಾಯಕ ಆಯುಕ್ತ ಹುದ್ದೆಗೆ 2 ಕೋಟಿ ರೂ., ಡಿವೈಎಸ್ಪಿಗೆ 2 ಕೋಟಿ ರೂ., ವಾಣಿಜ್ಯ ತೆರಿಗೆ 1.50 ಕೋಟಿ ರೂ., ಪಂಚಾಯತ್ ಅಧಿಕಾರಿಗೆ ಒಂದೂವರೆ ಕೋಟಿ ರೂ. ನಿಗದಿ ಮಾಡಲಾಗಿದೆ ಎಂದರು.
ಇತ್ತೀಚೆಗೆ ನಡೆದ ಗ್ರೂಪ್ “ಎ’ ಮತ್ತು “ಬಿ’ಯ 384 ಹುದ್ದೆಗಳಿಗೆ ನಡೆದ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಲೋಪದ ಬಗ್ಗೆ ಪ್ರಸ್ತಾವಿಸಿ, ಗೂಗಲ್ ಭಾಷಾಂತರದಿಂದ ಕನ್ನಡಕ್ಕೆ ಅವಮಾನ ಮಾಡಲಾಗಿದೆ. ಇದಕ್ಕೆ ಕಾರಣವಾದ ಅಧಿಕಾರಿಯ ನಾಲಗೆ ಸೀಳಬೇಡವೇ ಎಂದು ಅಶೋಕ್ ಅವರು ರಾಜರತ್ನಂ ಅವರ ಕವನದ ಸಾಲನ್ನು ಉಲ್ಲೇಖೀಸಿ ಪ್ರಶ್ನೆ ಮಾಡಿದರು. ಈ ಬಗ್ಗೆ ವಿಚಾರಣೆ ನಡೆಸಬೇಕು, ಜತೆಗೆ ಹಳೆಯ ಅಧಿಸೂಚನೆ ವಾಪಸ್ ಪಡೆದು ಹೊಸದಾಗಿ ನೇಮಕ ಪ್ರಕ್ರಿಯೆ ನಡೆಸುವಂತೆ ಆಗ್ರಹಿಸಿದರು.
ಈ ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಮಾನ ಮಾಡಲಾಗಿದೆ. ಕನ್ನಡದಲ್ಲಿರುವ ಯಾವುದೇ ಪ್ರಶ್ನೆಯ ಭಾಷಾಂತರದಲ್ಲಿ ಗೊಂದಲವಾದರೆ ಆಂಗ್ಲ ಭಾಷೆಯ ಪ್ರಶ್ನೆಗಳನ್ನು ನೋಡಿ ಅರ್ಥೈಸಿಕೊಳ್ಳಿ ಎಂದು ಹೇಳಿರುವುದೇ ತಪ್ಪು. ಪ್ರತೀ ಪ್ರಶ್ನೆಯ ಅನುವಾದವೂ ತಪ್ಪು. ಇದರಿಂದ 2 ಲಕ್ಷ ಜನರಿಗೆ ಅನ್ಯಾಯವಾಗಿದೆ. ಇವರೆಲ್ಲರೂ ಬಡವರಾಗಿದ್ದು, ಉದ್ಯೋಗದ ಕನಸು ನುಚ್ಚುನೂರಾಗಿದೆ. ಇದಕ್ಕೆ ಕಾರಣವಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಡವೇ ಎಂದು ಗುಡುಗಿದರು.
ಈ ಪರೀಕ್ಷೆ ನಡೆಸುವುದಕ್ಕೆ ರಾಜ್ಯ ಸರಕಾರ ಮೊದಲ ಬಾರಿಗೆ 15 ಕೋಟಿ ರೂ. ನೀಡಿತ್ತು. ಆದರೆ ಆಯೋಗ ಸಿದ್ಧಪಡಿಸಿದ ಪ್ರಶ್ನೆಪತ್ರಿಕೆಯಲ್ಲಿ 59 ತಪ್ಪುಗಳಿದ್ದವು. ಈ ಬಗ್ಗೆ ಟೀಕೆಗಳು ಕೇಳಿಬಂದಾಗ ಖುದ್ದು ಸಿಎಂ ಸಿದ್ದರಾಮಯ್ಯನವರೇ ತಮ್ಮ “ಎಕ್ಸ್’ ಖಾತೆಯಲ್ಲಿ ಟ್ವೀಟ್ ಮಾಡಿ, ನಾವು ನಮ್ಮ ನೇಮಕ ಪ್ರಕ್ರಿಯೆಯ ಪಾವಿತ್ರ್ಯವನ್ನು ಎತ್ತಿ ಹಿಡಿಯುವುದಾಗಿ ಭರವಸೆ ನೀಡಿದ್ದರು. ಕನ್ನಡ ಅನುವಾದದಲ್ಲಿ ಆಗಿರುವ ಲೋಪದ ಹಿನ್ನೆಲೆಯಲ್ಲಿ 2 ತಿಂಗಳೊಳಗಾಗಿ ಜವಾಬ್ದಾರಿ ಹಾಗೂ ಉತ್ತರದಾಯಿತ್ವದಿಂದ ಕೂಡಿದ ರೀತಿಯಲ್ಲಿ ಪರೀಕ್ಷೆ ನಡೆಸುವಂತೆ ಕೆಪಿಎಸ್‌ಸಿಗೆ ಸೂಚನೆ ನೀಡುತ್ತೇನೆ ಎಂದಿದ್ದರು.
ಇದಾದ ಬಳಿಕ ಮರು ಪರೀಕ್ಷೆಗೆ ಮತ್ತೆ ಅಷ್ಟೇ ಹಣ ನೀಡಲಾಗಿದೆ. ಮರು ಪರೀಕ್ಷೆಯಲ್ಲಿ ಮತ್ತೆ 79 ತಪ್ಪುಗಳಾಗಿವೆ. ಈ ಪ್ರಶ್ನೆಪತ್ರಿಕೆಗಳಲ್ಲಿ ಕನ್ನಡವನ್ನು 2ನೇ ದರ್ಜೆ ಎಂಬಂತೆ ನೋಡಲಾಗಿದೆ. 30 ಕೋಟಿ ರೂ. ಹಣ ಹಾಳು ಮಾಡಿದ ಅಧಿಕಾರಿಯನ್ನು ಅಮಾನತು ಮಾಡಬೇಕು. ಮರುಪರೀಕ್ಷೆ ನಡೆಸಬೇಕು. ಅಭ್ಯರ್ಥಿಗಳ ವಯೋಮಿತಿಗೆ ವಿನಾಯಿತಿ ನೀಡಬೇಕು. ಅಕ್ರಮದ ವಿರುದ್ಧ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
Advertisement