DK Shivakumar
ಡಿಕೆ ಶಿವಕುಮಾರ್ online desk

ಬಣ್ಣ ಕಟ್ಟಿ ಮಾತನಾಡಲು ಬರುವುದಿಲ್ಲ, ಹಳ್ಳಿ ಭಾಷೆಯಲ್ಲಿ ಉತ್ತರ ನೀಡಿದ್ದೇನೆ: ನಟ್ಟು- ಬೋಲ್ಟ್ ಹೇಳಿಕೆಗೆ ಡಿಕೆಶಿ ಸಮರ್ಥನೆ

ನನಗೆ ಬಣ್ಣ ಕಟ್ಟಿ ಮಾತನಾಡಲು ಬರುವುದಿಲ್ಲ. ನೇರವಾಗಿ ನನ್ನ ಹಳ್ಳಿ ಭಾಷಣೆಯಲ್ಲಿ ಉತ್ತರ ನೀಡಿದ್ದೇನೆ. ನಾನು ಅವರಿಗೆಲ್ಲ ಎಷ್ಟು ಸಹಾಯ ಮಾಡಿದ್ದೇನೆ ಎನ್ನುವುದು ನನಗೆ, ಸಹಾಯ ಪಡೆದವರಿಗೆ ಗೊತ್ತಿದೆ. ನಾನು ಅವರಿಗೆ ರಾಜ್ಯದ ಹಿತಕ್ಕಾಗಿ ಹೇಳಿದ್ದೇನೆ. ನೆಲ, ಜಲ, ಭಾಷೆ ಉಳಿಯಬೇಕು.
Published on

ಬೆಂಗಳೂರು: ನಟ್ಟು-ಬೋಲ್ಟು ವಿಚಾರವಾಗಿ ವಿಪಕ್ಷಗಳು ಹಾಗೂ ಕೆಲ ಚಿತ್ರರಂಗದ ಪ್ರಮುಖರು ಟೀಕೆ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಬಣ್ಣ ಕಟ್ಟಿ ಮಾತನಾಡಲು ಬರುವುದಿಲ್ಲ. ನೇರವಾಗಿ ನನ್ನ ಹಳ್ಳಿ ಭಾಷಣೆಯಲ್ಲಿ ಉತ್ತರ ನೀಡಿದ್ದೇನೆ. ನಾನು ಅವರಿಗೆಲ್ಲ ಎಷ್ಟು ಸಹಾಯ ಮಾಡಿದ್ದೇನೆ ಎನ್ನುವುದು ನನಗೆ, ಸಹಾಯ ಪಡೆದವರಿಗೆ ಗೊತ್ತಿದೆ. ನಾನು ಅವರಿಗೆ ರಾಜ್ಯದ ಹಿತಕ್ಕಾಗಿ ಹೇಳಿದ್ದೇನೆ. ನೆಲ, ಜಲ, ಭಾಷೆ ಉಳಿಯಬೇಕು ಎಂದು ಹೇಳಿದ್ದಾರೆ.

ಕನ್ನಡ ಚಲನಚಿತ್ರೋದ್ಯಮದ ಬಗ್ಗೆ ನಾನು ಏನೇ ಹೇಳಿದರೂ ಅದು ಅದರ ಒಳ್ಳೆಯದಕ್ಕಾಗಿಯೇ. ಹಳ್ಳಿಗಾಡಿನ ಸ್ವಭಾವದಿಂದಾಗಿ ನನ್ನ ಮಾತುಗಳು ಕಠಿಣವಾಗಿರಬಹುದು. ಕನ್ನಡ ಚಲನಚಿತ್ರೋದ್ಯಮ ಉಳಿದು ಅಭಿವೃದ್ಧಿ ಹೊಂದಬೇಕೆಂದು ನಾನು ಬಯಸುತ್ತೇನೆಂದು ತಿಳಿಸಿದರು.

ನಾನು ಇದೇ ರಂಗಕ್ಕೆ ಸೇರಿದವನು. ಈ ಹಿಂದೆ ಇಂದಿರಾಗಾಂಧಿ ಅವರ ಹೆಸರಿನಲ್ಲಿ ಟೂರಿಂಗ್ ಟಾಕೀಸ್ ನಡೆಸುತ್ತಿದ್ದೆ. ಈಗ ನಮ್ಮ ಒಡೆತನದ 23 ಸಿನಿಮಾ ಪ್ರದರ್ಶನ ಪರದೆಗಳು ಬೆಂಗಳೂರಿನಲ್ಲಿವೆ, ನಮ್ಮ ಕನ್ನಡ ಚಿತ್ರರಂಗ ಇತ್ತೀಚೆಗೆ ಒಂದೆರಡು ಸಿನಿಮಾಗಳಿಂದ ಬಾಲಿವುಡ್ಗಿಂತ ಕೊಂಚ ಎತ್ತರಕ್ಕೆ ಬೆಳೆದಿದೆ. ಚಿತ್ರಗಳ ಗುಣಮಟ್ಟ ಹಾಲಿವುಡ್ ಗುಣಮಟ್ಟಕ್ಕೆ ಬೆಳೆಯುತ್ತಿದೆ. ಒಂದಷ್ಟು ಜನ ಇದಕ್ಕಾಗಿ ಶ್ರಮ ಪಡುತ್ತಿದ್ದಾರೆ. ಈ ಹೆಜ್ಜೆ ಗುರುತುಗಳು ಉಳಿಯಬೇಕು, ಇನ್ನೂ ಎತ್ತರಕ್ಕೆ ಚಿತ್ರರಂಗವನ್ನು ತೆಗೆದುಕೊಂಡು ಹೋಗಬೇಕು ಎಂಬುದು ನನ್ನ ಉದ್ದೇಶ ಮತ್ತು ಆಶಯವಾಗಿದೆ ಎಂದರು.

ಮುಂದಿನ ವರ್ಷ ಬೆಂಗಳೂರಿನಲ್ಲಿ ಐಫಾ (ಐಐಎಫ್ ಎ) ಪ್ರಶಸ್ತಿ ನೀಡುವ ಕುರಿತು ಆಲೋಚನೆ ಮಾಡಿದ್ದೇನೆ. ಇದರ ಬಗ್ಗೆ ಈಗಾಗಲೇ ಎರಡು ಸುತ್ತಿನ ಮಾತುಕಥೆ ನಡೆದಿದೆ. ಪ್ರಶಸ್ತಿ ನೀಡುವ ತಂಡ ಈಗಾಗಲೇ ಬಂದು ನನ್ನ ಬಳಿ ಮಾತುಕಥೆ ನಡೆಸಿದೆ. ಇತ್ತೀಚೆಗೆ ಅಬುದಾಬಿಗೆ ಹೋದಾಗಲೂ ಚರ್ಚೆ ನಡೆಸಿದ್ದೆ ಎಂದು ಹೇಳಿದರು.

ರಾಜ್ಯದ ನೆಲ, ಜಲ ಭಾಷೆ ರಕ್ಷಣೆಗೆ ಕಲಾವಿದರೂ ಹೋರಾಟ ಮಾಡಬೇಕು. ಇಲ್ಲ ಎನ್ನುವುದಾದರೆ ಕಳಸಾ- ಬಂಡೂರಿ ಹೋರಾಟಕ್ಕೆ ಚಿತ್ರರಂಗದವರು ಏಕೆ ಹುಬ್ಬಳ್ಳಿಗೆ ಹೋದರು? ರಾಜಕುಮಾರ್ ಅವರು ಪಕ್ಷ ಬೇಧ ಮರೆತು ಹೋರಾಟಕ್ಕೆ ಏಕೆ ಬರುತ್ತಿದ್ದರು? ಹಾಗಾದರೆ ಈಗಿನ ಚಿತ್ರರಂಗದ ಜವಾಬ್ದಾರಿ ಏನು? ರಾಜಕುಮಾರ್ ಅವರು ಇವರಿಗೆ ಮಾದರಿ ಅಲ್ಲವೇ ಎಂದು ಪ್ರಶ್ನಿಸಿದರು.

DK Shivakumar
ವಿಧಾನಸಭೆಯಲ್ಲಿ ನಟ್ಟು ಬೋಲ್ಟ್ ಸದ್ದು; ನಮ್ಮನ್ನು ಟಿವಿಯಲ್ಲಿ ತೋರಿಸುತ್ತಿಲ್ಲ ಎಂದು ಬಿಜೆಪಿ ಗಲಾಟೆ!

ದುನಿಯಾ ವಿಜಯ್, ಪ್ರೇಮ್, ಸಾಧು ಕೋಕಿಲ, ಸಾ.ರಾ. ಗೋವಿಂದು ಮತ್ತಿತರರು ಹೋರಾಟದಲ್ಲಿ ಭಾಗವಹಿಸಿದ್ದರು. ಇವರೆಲ್ಲಾ ಕಾಂಗ್ರೆಸ್ ಪಕ್ಷದಿಂದ ಬಂದಿದ್ದರೇ? ನನ್ನ ಮನೆಗೆ ನೀರು ತರಲು ಹೋರಾಟ ಮಾಡಲಿಲ್ಲ. ಇಡೀ ಬೆಂಗಳೂರಿಗೆ ನೀರು ತರಲು ಹೋರಾಟ ಮಾಡಿದ್ದೇವೆ. ಬೆಂಗಳೂರಲ್ಲಿ ಚಿತ್ರರಂಗದವರೂ ಇದ್ದಾರೆ. ಬರೀ ಕಾಂಗ್ರೆಸ್ ಕಾರ್ಯಕರ್ತರು ಇಲ್ಲ. ಚಿತ್ರಂಗದವರು ಬರದೇ ಇದ್ದರೂ ಹೋರಾಟ ಮಾಡುತ್ತೇವೆ. ರಾಜಕೀಯವಾಗಿ ಯಾರ್ಯಾರದ್ದು ಏನೆನಿದೆ ಎಂದು ನನಗೆ ತಿಳಿದಿಲ್ಲವೇ? ಇನ್ನಾದರೂ ಬುದ್ದಿ ಕಲಿಯಿರಿ ಎಂದಷ್ಟೇ ಹೇಳುತ್ತಿದ್ದೇನೆ. ತಗೊಳ್ಳೋದು ಬಿಡೋದು ಅವರಿಗೆ ಬಿಟ್ಟದ್ದು ಎಂದರು.

ರಾಜೇಂದ್ರ ಸಿಂಗ್ ಬಾಬು ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಜೇಂದ್ರ ಸಿಂಗ್ ಬಾಬು ನನ್ನ ಗೆಳೆಯ. ಅವರನ್ನು ಅಕಾಡೆಮಿಗೆ ಅಧ್ಯಕ್ಷರನ್ನಾಗಿ ಮಾಡಿದ್ದೆವು. ಅಧಿಕಾರ ದರ್ಪ ಇದ್ದ ಕಾರಣಕ್ಕೇ ಅವರನ್ನು ಆ ಸ್ಥಾನದಲ್ಲಿ ಕೂರಿಸಿದ್ದು. ಪಕ್ಷಕ್ಕೆ ಹಾಗೂ ಚಿತ್ರರಂಗಕ್ಕೆ ಸಹಾಯ ಮಾಡಲಿ ಎಂದು ಅವರಿಗೆ ಸ್ಥಾನ ನೀಡಲಾಗಿತ್ತು. ಇದಾದ ನಂತರ ಅವರು ಒಂದು ದಿನವೂ ಪಕ್ಷದ ಕೆಲಸಕ್ಕೆ ಬರಲಿಲ್ಲ. ದರ್ಪ ಸುಮ್ಮನೆ ಬರುವುದಿಲ್ಲ. ಜನರು ಕೊಟ್ಟ ಅಧಿಕಾರದಿಂದ ಬರುತ್ತದೆ. ಆ ಅಧಿಕಾರದಿಂದಲೇ ರಾಜೇಂದ್ರ ಸಿಂಗ್ ಬಾಬು ಅವರಂಥವರಿಗೆ ಅಧಿಕಾರ ಕೊಟ್ಟಿದ್ದದ್ದು ಎಂದು ಹೇಳಿದರು.

ನನಗೆ ಯಾವುದೇ ರೀತಿಯ ವರ್ಣನೆಯ ಅಗತ್ಯವಿಲ್ಲ. ಚಿತ್ರರಂಗದವರ ಉತ್ತಮ ವೇದಿಕೆಯನ್ನು, ಬದುಕು, ಬೆಳವಣಿಗೆಯನ್ನು ಅವರೇ ಉಳಿಸಿಕೊಳ್ಳಬೇಕಲ್ಲವೇ? ಶಿವಕುಮಾರ್, ಸಿದ್ದರಾಮಯ್ಯ ಅವರ ಮನೆ ಕಾರ್ಯಕ್ರಮಕ್ಕೆ ಬರಬೇಡಿ. ನಿಮ್ಮ ಕಾರ್ಯಕ್ರಮ, ನೀವು ಕಾರ್ಯಕ್ರಮಕ್ಕೆ ಬಂದು ಉಳಿಸಿ, ಬೆಳೆಸಿಕೊಂಡು ಹೋಗಿ ಎಂದು ಹೇಳಿದ್ದೇನೆ. ಎಲ್ಲಾ ಸೇರಿ ಸಂಘಟನೆ ಆಗಬೇಕಲ್ಲವೇ? ಎಂದು ಹೇಳಿದರು.

ಶನಿವಾರ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ, ಚಲನಚಿತ್ರ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸದಿರುವ ಬಗ್ಗೆ ಡಿಕೆ.ಶಿವಕುಮಾರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದಲ್ಲದೆ, ಕಾಂಗ್ರೆಸ್ ಆಯೋಜಿಸಿದ್ದ ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸದಿದ್ದಕ್ಕಾಗಿಯೂ ಟೀಕಿಸಿದ್ದರು.

ಕಲಾವಿದರು ನೆಲ, ಜಲ, ಭಾಷೆಗೆ ಸಂಬಂಧಿಸಿದ ಹೋರಾಟಗಳಲ್ಲಿ ಭಾಗವಹಿಸಬೇಕು. ಕೆಲವು ಸ್ಥಳಗಳಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡದಿದ್ದರೆ ಏನು ಮಾಡುತ್ತಾರೆ? ಅವರ ನಟ್‌ಗಳು ಮತ್ತು ಬೋಲ್ಟ್‌ಗಳನ್ನು ಹೇಗೆ ಬಿಗಿಗೊಳಿಸಬೇಕೆಂದು ನನಗೆ ತಿಳಿದಿದೆ ಎಂದು ಹೇಳಿದ್ದರು, ಈ ಹೇಳಿಕೆಗೆ ಚಿತ್ರರಂಗದ ಹಲವು ಕಲಾವಿದರು ಹಾಗೂ ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com