
ಬೆಂಗಳೂರು: ಜನರಿಗೆ ಅನ್ಯಾಯ ಮಾಡಿದ್ದಕ್ಕೆ ನೀವು ಕುಂಟುತ್ತಿದ್ದೀರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತು ಬಿಜೆಪಿ ಲೇವಡಿ ಮಾಡಿದೆ.
SCSP/TSP ಹಣ ದುರ್ಬಳಕೆ ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ (ಮಾರ್ಚ್ 06) ದಲಿತ ಸಂಘಟನೆಗಳು ಗುರುವಾರ ಪ್ರತಿಭಟನೆಗಳು ನಡೆಸಿದವು. ಇದಕ್ಕೆ ಬಿಜೆಪಿ ಬೆಂಬಲ ನೀಡಿದ್ದು, ಈ ವೇಳೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಭರದಲ್ಲಿ ಚೆಲುವಾದಿ ನಾರಾಯಣಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ಮಂಡಿನೋವು ಉಲ್ಲೇಖಿಸಿ ವ್ಯಂಗ್ಯವಾಡಿದ್ದಾರೆ.
ನಮ್ಮ ಜನರಿಗೆ ಅನ್ಯಾಯ ಮಾಡಿದ್ದಕ್ಕೆ ನೀವು ಕುಂಟುತ್ತಿದ್ದೀರಿ. ನಮ್ಮವರ ಹಣ ದುರುಪಯೋಗ ಮಾಡಿದ್ದಕ್ಕೆ ನೀವು ಈಗ ವ್ಹೀಲ್ ಚೇರ್ ನಲ್ಲೇ ಬರುತ್ತಿರುವುದು. 25 ಸಾವಿರ ಕೋಟಿ ರೂ. ದಲಿತರ ಹಣ ದುರ್ಬಳಕೆ ಆಗಿದೆ ಎಂದು ಆಕ್ರೋಶ ಹೊರಹಾಕಿದರು.
ಜನರಿಗೆ ಅನ್ಯಾಯ ಮಾಡಿದ್ದಕ್ಕೆ ನಿಮಗೆ ಈ ಸ್ಥಿತಿ ಬಂದಿದೆ. ಗ್ಯಾರಂಟಿಗಳನ್ನು ನೀವು ಕೊಟ್ಟೆ ಇಲ್ಲ. ನಮ್ಮಲ್ಲಿ ವಿದ್ಯಾವಂತರು ಹೆಚ್ಚಾಗುತ್ತಿರೆ, ಆದರೆ, ನಿರುದ್ಯೋಗ ಹೆಚ್ಚಾಗಿದೆ. ಪೇಪರ್ಗಳಲ್ಲಿ ಅಷ್ಟೇ ಗ್ಯಾರಂಟಿ ಇದೆ. ನಮಗೆ ಆ ಗ್ಯಾರಂಟಿ ಸಿಗುತ್ತಿಲ್ಲ. ಗುಲಾಮಗಿರಿಯ ಸುಖದ ಸಂಭ್ರಮ ಮಾಡುತ್ತಿದ್ದಾರೆ. ದಲಿತರು ಬೀದಿಯಲ್ಲಿ ಕುಳಿತಿದ್ದೇವೆ. ದಲಿತರಿಗೆ ಅನ್ಯಾಯ ಮಾಡಿದ್ದಕ್ಕೆ ಕುಂಟುವ ಹಾಗಾಗಿದೆ. ವ್ಹೀಲ್ಚೇರ್ ಬಂದಿದೆ ಎಂದು ಲೇವಡಿ ಮಾಡಿದ್ದಾರೆಂದು ಹೇಳಿದರು.
ಛಲವಾದಿ ನಾರಾಯಣ ಸ್ವಾಮಿಯವರ ಈ ಹೇಳಿಗೆ ಕಾಂಗ್ರೆಸ್ ನಾಯಕರು ತೀವ್ರವಾಗಿ ಕಿಡಿಕಾರಿದ್ದಾರೆ. ಮನುಸ್ಮೃತಿ ಆರಾಧಕರ ಆಜ್ಞೆಯ ಮೇರೆಗೆ ಚಡ್ಡಿ ಹೊತ್ತು ಕುಲ ಘಾತುಕ ಕೆಲಸ ಮಾಡಿದ, ಅಧಿಕಾರದಾಸೆಗೆ ಬಾಬಾ ಸಾಹೇಬರ ಆಶಯಗಳಿಗೆ ದ್ರೋಹ ಬಗೆದ, ರಾಜಕೀಯ ಅಸ್ತಿತ್ವ ಕಂಡುಕೊಂಡ ಉಂಡ ಮನೆಗೆ ದ್ರೋಹ ಬಗೆದ ಛಲವಾದಿ ನಾರಾಯಣಸ್ವಾಮಿ ಅವರಿಗೆ ಈಗ 'ಕರ್ಮ ಫಲ'ಗಳ ಪಾಠವೂ ಆಗಿದೆ. ಸಾವನ್ನೂ ಸಂಭ್ರಮಿಸುವವರ ಮನೆ ಸೇರಿದ ಮೇಲೆ ಇಂತಹ ಮಾತುಗಳು ಅತ್ಯಂತ ಸಹಜ. ಬೆನ್ನ ಹುರಿ ಬಾಧೆಗೆ ರಸ್ತೆಯ ಹಂಪ್‌ಗಳನ್ನೇ ತೆಗೆಸಿದವರ ಮುಂದೆ ನಡು ಬಗ್ಗಿಸಿ ನಿಂತವರಲ್ಲವೇ ನೀವು.. ಮಂಡಿ ನೋವಿಗೆ ಮದ್ದಿದೆ, ಅವರು ಸದಾ ತಮ್ಮ ಜನಪರ ನಿಲುವುಗಳಿಂದ ಸೆಟೆದು ನಿಂತಿದ್ದಾರೆ. ಅದರೆ ವಿಷ ತುಂಬಿದ ನಿಮ್ಮ ಮನೋ ವಿಕೃತಿಗೆ ಮದ್ದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
Advertisement