
ಬೆಂಗಳೂರು: ಲಿಂಗಾಯತ ಸಮಾವೇಶಗಳ ಚಿಂತನೆಗಳ ಕೈಬಿಡುವಂತೆ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಎಂ.ಪಿ. ರೇಣುಕಾಚಾರ್ಯ ಅವರಿಗೆ ಸಲಹೆ ನೀಡಿದ್ದಾರೆ.
ರೇಣುಕಾಚಾರ್ಯ ಅವರನ್ನು ತಮ್ಮ ಮನೆಗೆ ಬುಧವಾರ ರಾತ್ರಿ ಕರೆಸಿಕೊಂಡಿದ್ದ ಯಡಿಯೂರಪ್ಪ ಅವರು, ‘ಯಾವುದೇ ಸಭೆ– ಸಮಾವೇಶ ನಡೆಸಿ ಗೊಂದಲ ಸೃಷ್ಟಿಸುವುದು ಬೇಡ. ಇಂತಹ ಸಭೆಗಳು ಅನಗತ್ಯ ಒಡಕುಗಳನ್ನು ಮೂಡಿಸಲಿದೆ. ಏನೇ ಇದ್ದರೂ ಪಕ್ಷದ ಚೌಕಟ್ಟಿನಲ್ಲಿ ಮಾತುಕತೆ ಮಾಡಿ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಕರೆಸಿಕೊಂಡ ಯಡಿಯೂರಪ್ಪ ಅವರು, ಇಂತಹ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಸೂಚನೆ ನೀಡಿದ್ದಾರೆಂದು ವರದಿಗಳು ತಿಳಿಸಿವೆ.
ಯಡಿಯೂರಪ್ಪ ಸೂಚನೆ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ರೇಣುಕಾರ್ಯ ಅವರು, ಇದು ರಾಜಕೀಯ ಸಭೆಯಲ್ಲ. ಸಮುದಾಯವನ್ನು ಸಂಘಟಿಸಲು ನಡೆಸುತ್ತಿರುವ ಸಮಾವೇಶವಾಗಿದೆ. ಹೀಗಾಗಿ, ನಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.
ವೀರಶೈವ ಲಿಂಗಾಯತ ಸಮುದಾಯದ ನಿವೃತ್ತ ಅಧಿಕಾರಿಗಳು ಮತ್ತು ಅನೇಕ ಸಂಘಟನೆಗಳ ಸದಸ್ಯರು ಎಲ್ಲರೂ ಒಟ್ಟಾಗಿ ಸಮಾವೇಶಗಳನ್ನು ಆಯೋಜಿಸಲು ಮುಂದೆ ಬಂದಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಸಮುದಾಯಕ್ಕಾಗಿ ಒಟ್ಟಾಗಿ ಕೆಲಸ ಮಾಡುವಂತೆ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಸಮುದಾಯದ ಎಲ್ಲಾ ನಾಯಕರು ರೇಣುಕಾಚಾರ್ಯ ಅವರು ಆಹ್ವಾನ ನೀಡಿದರು.
ಮೇ 15 ರೊಳಗೆ ರಾಜ್ಯದ ವಿವಿಧ ಭಾಗಗಳಲ್ಲಿ ಸಮಾವೇಶಗಳನ್ನು ಮತ್ತು ದಾವಣಗೆರೆಯಲ್ಲಿ ಮೆಗಾ ರ್ಯಾಲಿಯನ್ನು ನಡೆಸುವ ಚಿಂತನೆಗಳಿವೆ ಎಂದು ಮಾಹಿತಿ ನೀಡಿದರು.
Advertisement