SCSP/TSP ಹಣ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ: ಸರ್ಕಾರದ ವಿರುದ್ಧ ಆರ್.ಅಶೋಕ್ ವಾಗ್ದಾಳಿ

SCSP/TSP ಹಣ ಗ್ಯಾರಂಟಿಗೆ ಬಳಸಲಾಗುತ್ತಿದೆ. ಆ ಹಣವನ್ನು ಮೂಲ ಉದ್ದೇಶಕ್ಕೆ ಮಾತ್ರ ಬಳಸಬೇಕಾಗಿತ್ತು. ಮೂಲ ಉದ್ದೇಶ ಬಳಸದೇ ಅನ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ. ಬಸ್​ಗಳಲ್ಲಿ ಪ್ರಯಾಣ ಬೆಳೆಸುವವರು ಯಾರು ಎಂದು ಹೇಗೆ ಗುರುತಿಸುತ್ತೀರಿ?
ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ
ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ
Updated on

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡಗಳ (ST) ಕಲ್ಯಾಣಕ್ಕಾಗಿ ಮೀಸಲಾದ SCSP/TSP ಅನುದಾನಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದು, ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಗುರುವಾರ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, SCSP/TSP ಹಣ ಗ್ಯಾರಂಟಿಗೆ ಬಳಸಲಾಗುತ್ತಿದೆ. ಆ ಹಣವನ್ನು ಮೂಲ ಉದ್ದೇಶಕ್ಕೆ ಮಾತ್ರ ಬಳಸಬೇಕಾಗಿತ್ತು. ಮೂಲ ಉದ್ದೇಶ ಬಳಸದೇ ಅನ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ. ಬಸ್​ಗಳಲ್ಲಿ ಪ್ರಯಾಣ ಬೆಳೆಸುವವರು ಯಾರು ಎಂದು ಹೇಗೆ ಗುರುತಿಸುತ್ತೀರಿ?. ದಲಿತರ ದುಡ್ಡಿಗೆ ಕೈ ಹಾಕಿದ್ದಾರೆ. ಗ್ಯಾರಂಟಿಗಾಗಿ ಶೇ.33ರಷ್ಟು SCSP/TSP ಅನುದಾನ ಬಳಕೆ ಮಾಡಿಕೊಂಡಿದ್ದಾರೆ. ಇನ್ನುಳಿದ ಶೇ.67 ರಷ್ಟಾದರೂ ಆ ಜನಾಂಗಗಕ್ಕೆ ಹೋಗುತ್ತಾ ಇದೆಯಾ?. ಅದು ಕೂಡ ಇಲ್ಲ. ಅದಕ್ಕೂ ಕತ್ತರಿ ಹಾಕಿದ್ದಾರೆ. ಇದನ್ನು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ರಾಜ್ಯದ ಪಾಲಾಗಿ ಬಳಸುತ್ತಿದ್ದಾರೆ ಎಂದು ಆರೋಪಿಸಿದರು.

ಪರಿಶಿಷ್ಟ ಸಮುದಾಯಕ್ಕೆ ಹೆಚ್ಚು ಅನುದಾನ ನೀಡಬೇಕೆಂದು ಈ ಹಿಂದೆಯೇ ಯೋಜನಾ ಆಯೋಗ ಹೇಳಿದೆ. ಪರಿಶಿಷ್ಟರಲ್ಲಿ ಲಿಂಗಾನುಪಾತ ಕಡಿಮೆಯಾಗುತ್ತಿದೆ. ಸಾಕ್ಷರತೆ, ಶಿಶು ಮರಣ, ಲಸಿಕೆ, ಕೆಲಸ-ಕಾರ್ಯ, ವಿದ್ಯುತ್‌ ಸೌಲಭ್ಯ, ಕುಡಿಯುವ ನೀರು, ಜಮೀನು ಒಡೆತನ ಮೊದಲಾದವುಗಳಲ್ಲಿ ಅವರು ಹಿಂದುಳಿದಿದ್ದಾರೆ. ಇಂದಿನ ಪರಿಶಿಷ್ಟರ ಪರಿಸ್ಥಿತಿ ಹೇಗಿದೆ ಎಂದು ಸರ್ಕಾರ ತಿಳಿಸಬೇಕು. 42,000 ಕೋಟಿ ರೂ. ಹಣವನ್ನು SCSP/TSPಗೆ ನೀಡಲಾಗಿದೆ. ಅಂಗನವಾಡಿ ಕಟ್ಟಡ ನಿರ್ಮಿಸಲು ಪರಿಶಿಷ್ಟರಿಗೆ ಸೇರಿದ 4 ಕೋಟಿ ರೂ. ಖರ್ಚು ಮಾಡಲಾಗಿದೆ. ಪ್ರವಾಸೋದ್ಯಮಕ್ಕೂ ಈ ಹಣ ಬಳಸಲಾಗಿದೆ. ಆದರೆ, ಇದರಿಂದ ಯಾವ ಪರಿಶಿಷ್ಟರಿಗೆ ಅನುಕೂಲವಾಗಿದೆ? ಅರಣ್ಯ ಇಲಾಖೆಯಡಿ ಹುಲಿ ಹಾಗೂ ಆನೆ ಯೋಜನೆಗೆ ಈ ಹಣವನ್ನು ಬಳಸಲಾಗಿದೆ. ಗ್ರೀನ್‌ ಇಂಡಿಯಾ ಮಿಶನ್‌ಗೆ 34 ಕೋಟಿ ರೂ. ನೀಡಲಾಗಿದೆ ಎಂದು ಕಿಡಿಕಾರಿದರು.

ಪರಿಶಿಷ್ಟರಿಗೆ ಮಾತ್ರ ಹಣ ಮೀಸಲಿಡಬೇಕು ಎಂದು ಕೇಂದ್ರ ಸರ್ಕಾರ ಬಹಳ ಹಿಂದೆಯೇ ಹೇಳಿದೆ. ಈ ಸ್ವಾತಂತ್ರ್ಯವನ್ನು ಸಮಾಜ ಕಲ್ಯಾಣ ಇಲಾಖೆಗೆ ನೀಡಬೇಕು. ಆದರೆ, ಇಲಾಖೆಗೆ ಆ ಸ್ವಾತಂತ್ರ್ಯವೇ ಇಲ್ಲ. ಈ ಕುರಿತು ಮಾಜಿ ಪ್ರಧಾನಿ ಇಂದಿರಾಗಾಂಧಿ ಕೂಡ ಪತ್ರ ಬರೆದು ಸೂಚನೆ ನೀಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆಗೆ ಸ್ವಲ್ಪ ಗೌರವ ತನ್ನಿ ಎಂದರು.

ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ
ಶೇ. 40ರಷ್ಟು ಕಮಿಷನ್‌: ನಾಗಮೋಹನ್ ದಾಸ್ ಆಯೋಗದಿಂದ ರಾಜಕೀಯ ಪ್ರೇರಿತ ವರದಿ ಸಲ್ಲಿಕೆ- ಆರ್. ಅಶೋಕ್ ಟೀಕೆ

ಇದೇ ವೇಳೆ ವಸತಿ ಸಚಿವ ಜಮೀರ್ ಅಹ್ಮದ್ ಅವರು ಮುಸ್ಲಿಮರ ಕಲ್ಯಾಣಕ್ಕಾಗಿ (14%) 60,000 ಕೋಟಿ ರೂ.ಗಳನ್ನು ನಿಗದಿಪಡಿಸಬೇಕೆಂಬ ಬೇಡಿಕೆಯನ್ನು ಉಲ್ಲೇಖಿಸಿದ ಅಶೋಕ್ ಅವರು, ಎಸ್‌ಸಿ ಮತ್ತು ಎಸ್‌ಟಿಗಳ (24%) ಜನಸಂಖ್ಯೆಯನ್ನು ಪರಿಗಣಿಸಿದರೆ ಅವರಿಗೆ 98,701 ಕೋಟಿ ರೂ.ಗಳನ್ನು ನೀಡಬೇಕು. ಆದರೆ ಕೇವಲ 42,017 ಕೋಟಿ ರೂ.ಗಳನ್ನು ಮಾತ್ರ ನೀಡಲಾಗುತ್ತಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಜೆಟ್ ಪ್ರಸ್ತಾವನೆಗಳ ಅನುಷ್ಠಾನದಲ್ಲಿ ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ಬಜೆಟ್‌ನಲ್ಲಿ ಉಲ್ಲೇಖಿಸಲಾದ ತೆರಿಗೆಗಳನ್ನು ಹೊರತುಪಡಿಸಿ ಯಾವುದೇ ಹೊಸ ತೆರಿಗೆಗಳನ್ನು ವಿಧಿಸುವುದಿಲ್ಲ ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com