
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಹನಿ ಟ್ರ್ಯಾಪ್ ವಿಚಾರ ಗುರುವಾರ ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ್ದು, ಸ್ವತಃ ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಅವರೇ ನನ್ನ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿರುವುದು ಸತ್ಯ ಎಂದು ಹೇಳಿದ್ದಾರೆ. ಅಲ್ಲದೆ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಮತ್ತು ಇದರ ಹಿಂದೆ ಇರುವವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇಂದು ವಿಧಾನಸಭೆಯಲ್ಲಿ ಹನಿಟ್ರ್ಯಾಪ್ ವಿಚಾರದ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಮಧ್ಯ ಪ್ರವೇಶಿಸಿ ಮಾತನಾಡಿದ ಬಿಜೆಪಿ ಶಾಸಕ ಮುನಿರತ್ನ ಅವರು, ನನಗೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಂದ ಅನ್ಯಾಯ ಆಗಿದೆ. ನನ್ನ ವಿರುದ್ಧ ಅತ್ಯಾಚಾರದ ಕೇಸ್ ಹಾಕಿಸಿದ್ದಾರೆ. ನೀನು ರಾಜೀನಾಮೆ ಕೊಟ್ರೆ ಜಾತಿ ನಿಂದನೆ ಕೇಸ್ ವಾಪಸ್ ಪಡೆಯುತ್ತೇನೆ ಎಂದು ಹೇಳಿರುವುದಾಗಿ ತಿಳಿಸಿದರು.
ನನ್ನ ಮೇಲೆ ರೇಪ್ ಕೇಸ್ ಹಾಕಿ ನನ್ನ ಜೀವನವನ್ನೇ ಹಾಳು ಮಾಡಿದ್ದಾರೆ ಎಂದು ಡಿಕೆಶಿ ವಿರುದ್ಧ ಕಿಡಿ ಕಾರಿದ ಮುನಿತರತ್ನ, ಅಜ್ಜಯ ಮತ್ತೆ ಶನಿ ಮಹಾತ್ಮ ದೇವರ ಫೋಟೋ ತೋರಿಸಿ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.
ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಎಚ್.ಡಿ ರೇವಣ್ಣ ಮೇಲೂ ಇದೇ ಕುತಂತ್ರ ಮಾಡಿದ್ರು. ಈಗ ಸಚಿವ ರಾಜಣ್ಣ ಅವರ ವಿರುದ್ಧ ಕುತಂತ್ರ ಮಾಡಿದ್ದಾರೆ. ಡಿ.ಕೆ ಶಿವಕುಮಾರ್ ಅವರಿಗೆ ಒಂದು ಕಿವಿಮಾತು ಹೇಳುತ್ತೇನೆ. ನಿಮ್ಮ ಹನಿಟ್ರ್ಯಾಪ್ ಟೀಂ ನನಗೆ ಗೊತ್ತಿದೆ. ನೀವು ರಾತ್ರಿ ಮಿಟೀಂಗ್ ಮಾಡಿದ್ದು ಗೊತ್ತಿದೆ ಎಂದು ಹೊಸ ಬಾಂಬ್ ಸಿಡಿಸಿದರು.
ಅವರಿಗೆ ಈ ಮಹಾ ಪಾಪದ ಕೆಲಸ ಯಾಕೆ ಬೇಕು? ನನಗೆ ಆಗಿರುವ ನೋವನ್ನು ನಾನು ಹೇಳಿದ್ದೀನಿ. ಸಿಸಿಟಿವಿ, ಆಡಿಯೋ ಎಲ್ಲಾ ಸಾಕ್ಷಿಗಳು ಇವೆ. ರಮೇಶ್ ಜಾರಕಿಹೊಳಿ, ನಾನು ಕಾಂಗ್ರೆಸ್‌ನಲ್ಲಿ ಇದ್ದಿದ್ದು. ರಾಜಣ್ಣ ಸಹ ಕಾಂಗ್ರೆಸ್‌ನಲ್ಲಿ ಇರೋದು. ಇದು ಒಳ್ಳೆಯದು ಅಲ್ಲ ಎಂದು ಡಿ.ಕೆ ಶಿವಕುಮಾರ್ ವಿರುದ್ಧ ಮುನಿರತ್ನ ತೀವ್ರ ವಾಗ್ದಾಳಿ ನಡೆಸಿದರು.
Advertisement