
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡುತ್ತಿರುವ ಹನಿ ಟ್ರ್ಯಾಪ್ ವಿಚಾರ ಗುರುವಾರ ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ್ದು, ಸ್ವತಃ ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಅವರೇ ನನ್ನ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿರುವುದು ಸತ್ಯ ಎಂದು ಒಪ್ಪಿಕೊಂಡಿದ್ದಾರೆ.
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸಚಿವ ಕೆಎನ್ ರಾಜಣ್ಣ ಅವರ ಪುತ್ರ ಹಾಗೂ ಕಾಂಗ್ರೆಸ್ ಎಂಎಲ್ ಸಿ ರಾಜೇಂದ್ರ ಅವರು ತಮ್ಮನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸುವ ಯತ್ನ ನಡೆದಿದೆ ಎಂದು ಹೇಳಿದ್ದಾರೆ.
ಹನಿಟ್ರ್ಯಾಪ್ ಗೆ ಯತ್ನಿಸುತ್ತಿರುವ ಬಗ್ಗೆ ತಂದೆಯೇ ಒಪ್ಪಿಕೊಂಡಿದ್ದಾರೆ. ಎರಡು ತಿಂಗಳಿಂದ ನಮ್ಮ ತಂದೆಗೆ ಹನಿಟ್ರ್ಯಾಪ್ ಮಾಡಲು ಯತ್ನಿಸಿದ್ದಾರೆ. ಅಲ್ಲದೇ 6 ತಿಂಗಳಿನಿಂದ ನನ್ನ ಮೇಲೆ ಹನಿಟ್ರ್ಯಾಪ್ ಯತ್ನ ನಡೆಯುತ್ತಿದೆ. ತನಿಖೆ ಮಾಡುವುದಾಗಿ ಗೃಹ ಸಚಿವರು ಹೇಳಿದ್ದಾರೆ ಎಂದರು.
ನಮ್ಮಪ್ಪ ಮತ್ತು ನನಗೆ ಇಬ್ಬರಿಗೂ ಹನಿಟ್ರ್ಯಾಪ್ ಬಲೆಗೆ ಬೀಳಿಸಲು ಯತ್ನಿಸಲಾಗಿದೆ. ಇದು ರಾಜಕೀಯನಾ ಅಥವಾ ವೈಯಕ್ತಿಕನಾ ಎಂಬುದರ ಬಗ್ಗೆ ತನಿಖೆ ಆಗಲಿ. ಪೆನ್ ಡ್ರೈವ್, ಸಿಡಿ ಬಗ್ಗೆ ಅನೇಕ ಚರ್ಚೆಗಳು ನಡೆಯುತ್ತಿವೆ. ಅನೇಕ ರಾಜಕಾರಣಿಗಳು ಪೆನ್ಡ್ರೈವ್ ಬಗ್ಗೆ ಮಾತನಾಡಿದ್ದಾರೆ. ಇದರ ಹಿಂದೆ ಯಾರೋ ಇದ್ದಾರೆ, ಆದ್ರೆ ಯಾರೆಂದು ಗೊತ್ತಿಲ್ಲ. ದೂರು ಕೊಡುತ್ತೇವೆ, ತನಿಖೆ ಆಗಬೇಕಿದೆ ಎಂದರು.
ರಾಜಣ್ಣ ಅವರ ಬಗ್ಗೆ ಇಡೀ ರಾಜ್ಯಕ್ಕೆ ಗೊತ್ತು. ರಾಜಣ್ಣ ನೇರನುಡಿಯ ವ್ಯಕ್ತಿ. ಅವರನ್ನು ಕುಗ್ಗಿಸೋಕೆ, ಅಪ್ಪ, ಮಕ್ಕಳಿಗೆ ಕೆಟ್ಟ ಹೆಸರು ತರಬೇಕೆಂದು ಯಾರೋ ಮಾಡಿರಬಹುದು. ಹನಿಟ್ರ್ಯಾಪ್ ಅಂದ್ರೆ ನಮ್ಮ ಜೊತೆಯೇ ಇದ್ದಾರೆ ಅಂತಾ ಅಲ್ಲ. ವಿಡಿಯೋ ಕಾಲ್ ಮಾಡಿರೋದು ಆಗಿರುತ್ತೆ. ಯಾರೇ ಮಾಡಿರಲಿ ಪಕ್ಷಾತೀತಿವಾಗಿ ತನಿಖೆ ಆಗಬೇಕು. ಹಿಂದೆ ಹಣಕ್ಕಾಗಿ ರಾಜಕಾರಣಿಗಳು, ಉದ್ಯಮಿಗಳ ಮೇಲೆ ಆಗಿದೆ. 48 ಜನರ ಮೇಲೆ ಹನಿಟ್ರ್ಯಾಪ್ ಆಗಿದೆ ಎಂದು ಸಚಿವರು ಹೇಳಿದ್ದಾರೆ. ಯಾರ ಮೇಲೆ ಆದರೂ ತಪ್ಪೇ, ಇದು ಅಂತ್ಯವಾಗಬೇಕು ಎಂದು ಆಗ್ರಹಿಸಿದರು.
Advertisement