
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಅವರ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿತ್ತು ಎಂಬ ವಿಚಾರ ರಾಜಕೀಯ ವಲಯವನ್ನು ತಲ್ಲಣಗೊಳಿಸಿದೆ. ಇದೇ ವೇಳೆ ಸಿಎಂ ಕುರ್ಚಿಗಾಗಿ ಹನಿಟ್ರ‍್ಯಾಪ್ ಯತ್ನ ನಡೆದಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಆರ್.ಅಶೋಕ್ ಅವರು, ಸಚಿವ ರಾಜಣ್ಣ ಅವರೇ ಸದನದಲ್ಲಿ 48 ಜನರ ಮೇಲೆ ಹನಿಟ್ರ್ಯಾಪ್ ಆಗಿದೆ ಎಂದಿದ್ದಾರೆ. ಈ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಅವರು ಸರಿಯಾದ ಉತ್ತರ ಕೊಟ್ಟಿಲ್ಲ. ಇದು ಚಿಕ್ಕ ವಿಚಾರ ಅಲ್ಲ, ಗಂಭೀರ ಪ್ರಕರಣ.
ಇದು ಎಲ್ಲ ಶಾಸಕರು, ಸದನದ ಹಾಗೂ ರಾಜ್ಯದ ಮರ್ಯಾದೆ ಪ್ರಶ್ನೆಯೂ ಹೌದು. ಹಾಗಾಗಿ ಈ ಬಗ್ಗೆ ಸಿಬಿಐ ಅಥವಾ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಕೆ.ಎನ್.ರಾಜಣ್ಣ ಅವರು ಸಾಮಾನ್ಯ ವ್ಯಕ್ತಿಯೇನಲ್ಲ. ಅವರು ಇದೇ ಕಾಂಗ್ರೆಸ್ ಸರ್ಕಾರದ ಸಚಿವರು. ಹೀಗಿರುವಾಗ ಅವರೇ ಸದನದಲ್ಲಿ ಆರೋಪ ಮಾಡಿದ್ದು, ಈ ಸರ್ಕಾರದಲ್ಲಿ ದಲಿತ ಸಚಿವರಿಗೆ ಸೂಕ್ತ ರಕ್ಷಣೆಯೇ ಇಲ್ಲ.
ಇದನ್ನೆಲ್ಲ ಗಮನಿಸಿದರೆ ಸಿಎಂ ಕುರ್ಚಿಗಾಗಿಯೇ ಹನಿಟ್ರ್ಯಾಪ್ ಯತ್ನ ನಡೆದಿದೆ ಎಂದು ಅಶೋಕ್ ಹೊಸ ಬಾಂಬ್ ಸಿಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕ್ಯಾಬಿನೆಟ್ ಸಚಿವರ ಗೌರವ ಕಾಪಾಡಬೇಕು.
ಹನಿಟ್ರ್ಯಾಪ್ ದಂಧೆಯ ಕುರಿತು ಸಮಗ್ರ ತನಿಖೆ ನಡೆಸಬೇಕು. ಹನಿಟ್ರ್ಯಾಪ್ ದಂಧೆಯಲ್ಲಿ ನ್ಯಾಯಾಧೀಶರನ್ನು, ರಾಜಕೀಯ ನಾಯಕರನ್ನೂ ಬೀಳಿಸಲಾಗಿದೆ ಎಂದು ಪತ್ರಿಕೆಗಳು ವರದಿ ಮಾಡಿವೆ. ಹೀಗಾಗಿ, ಹಾಲಿ ಹೈಕೋರ್ಟ್ ನ್ಯಾಯಾಧೀಶರ ಮೂಲಕ ಈ ಬಗ್ಗೆ ತನಿಖೆ ನಡೆಸಬೇಕು.
ಮುಖ್ಯಮಂತ್ರಿ ಪದವಿಗೋ, ರಾಜಕೀಯ ಹಿತಾಸಕ್ತಿಗೋ ಇಷ್ಟು ಕೀಳುಮಟ್ಟಕ್ಕೆ ಯಾರೂ ಇಳಿಯಬಾರದು ಎಂದು ವಾಗ್ದಾಳಿ ನಡೆಸಿದ್ದಾರೆ. ಹನಿಟ್ರ‍್ಯಾಪ್ ವಿಚಾರ ಸದನದಲ್ಲಿ ಪ್ರಸ್ತಾಪ ಆಗಿದ್ದು ಒಂದು ಗ್ಯಾಂಗ್ ಮಾಡಿದೆ ಎಂದು ಹೇಳಿದ್ದಾರೆ. ಏನಿದು ಕಳ್ಳಾಟ ನಡೆಯುತ್ತಿದ್ಯಾ? ರಾಜಣ್ಣ ಹೇಳಿಕೆ ಸದನದ ಆಸ್ತಿ ಎಂದರು.
Advertisement