
ಬೆಂಗಳೂರು: ಗುತ್ತಿಗೆ ಮೀಸಲಾತಿಯಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ವಿಚಾರ ಹೋರಾಟದಲ್ಲಿ ಬಿಜೆಪಿ-ಜೆಡಿಎಸ್ ನಡುವೆ ಹೊಂದಾಣಿಕೆ ಇಲ್ಲ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಸೋಮವಾರ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಮುಸ್ಲಿಮರಿಗೆ ಕಾಂಗ್ರೆಸ್ ಸರಕಾರ ಶೇ.4ರಷ್ಟು ಗುತ್ತಿಗೆ ಮೀಸಲಾತಿ ನೀಡಿರುವುದರ ವಿರುದ್ಧದ ಹೋರಾಟದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಹೊಂದಾಣಿಕೆ ಇಲ್ಲ, ಗೊಂದಲವಿದೆ ಎನ್ನುವುದು ಸತ್ಯಕ್ಕೆ ದೂರ. ಕೆಲ ಪತ್ರಿಕೆ ಮತ್ತು ಸುದ್ದಿವಾಹಿನಿಗಳಲ್ಲಿ ವರದಿಯಾಗಿರುವ ವರದಿಗಳು ಸತ್ಯಕ್ಕೆ ದೂರ. ವಿಧಾನಮಂಡಲ ಅಧಿವೇಶನ ಆರಂಭಕ್ಕೆ ಮೊದಲೇ ಬೆಂಗಳೂರಿನಲ್ಲಿ 'ಸಮನ್ವಯ ಸಮಿತಿ' ಸಭೆ ನಡೆದು ಎಲ್ಲಾ ವಿಚಾರಗಳನ್ನೂ ಸಮಗ್ರವಾಗಿ ಚರ್ಚಿಸಲಾಗಿದೆ. ಸರಕಾರದ ವಿರುದ್ಧ ಹೋರಾಟದ ರೂಪುರೇಷೆ ರೂಪಿಸಲಾಗಿತ್ತು. ಆ ಸಭೆಯಲ್ಲಿ ಸ್ವತಃ ನಾನೂ ಭಾಗವಹಿಸಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಸರಕಾರವು ಕೇವಲ ಚುನಾವಣಾ ಸ್ವಾರ್ಥಕ್ಕೆ, ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ 'ಸಾಮಾಜಿಕ ನ್ಯಾಯದ ಆದರ್ಶ ಪರಿಕಲ್ಪನೆ'ಯಾದ ಮೀಸಲಾತಿ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ. ಮೀಸಲಾತಿಯನ್ನೇ ಓಲೈಕೆ ಅಸ್ತ್ರವನ್ನಾಗಿ ಮಾಡಿಕೊಂಡು ರಾಜ್ಯದ ಜನತೆಯ ದಿಕ್ಕು ತಪ್ಪಿಸುತ್ತಿದೆ. ರಾಷ್ಟ್ರದ ಉದ್ದಗಲಕ್ಕೂ ಕಾಂಗ್ರೆಸ್ ಮೀಸಲು ಅರಾಜಕತೆ ಸೃಷ್ಟಿಸುತ್ತಿದೆ.
ಜೆಡಿಎಸ್ - ಬಿಜೆಪಿ ಪಕ್ಷಗಳು ಈಗಾಗಲೇ ಒಟ್ಟಾಗಿ ಅನೇಕ ಜನಪರ ಹೋರಾಟಗಳಲ್ಲಿ ಭಾಗಿಯಾಗಿವೆ, ಮುಂದೆಯೂ ಹೋರಾಡುತ್ತವೆ. ಈ ಬಗ್ಗೆ ರಾಜಿ ಪ್ರಶ್ನೆಯೇ ಇಲ್ಲ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ದುರ್ಬಲವಾಗಿರುವ ಎಲ್ಲಾ ಸಮುದಾಯಗಳಿಗೆ ಸಮಾನ ಅವಕಾಶಗಳು, ಸೌಲಭ್ಯಗಳು ಸಿಗಬೇಕು. ಆದರೆ, ಒಂದು ನಿರ್ದಿಷ್ಟ ಸಮುದಾಯದ ತುಷ್ಟೀಕರಣ, ಬಹು ಸಮುದಾಯಗಳ ತುಚ್ಚೀಕರಣ ನ್ಯಾಯ ಸಮ್ಮತವಲ್ಲ. ಇದು ಸಂವಿಧಾನಕ್ಕೆ ಎಸಗುವ ಅಪಚಾರ. ಮೀಸಲು ಧರ್ಮಾಧಾರಿತ ಅಲ್ಲ. ಅದು ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ನಿಂತಿದೆ. ನಿಂತಿರಬೇಕು ಎನ್ನುವುದು ನಮ್ಮ ಪಕ್ಷದ ಅಚಲ ನಿಲುವು ಎಂದು ತಿಳಿಸಿದ್ದಾರೆ.
ನಿಖಿಲ್ ಕುಮಾರ್ ಅವರು ಕೂಡ ಟ್ವೀಟ್ ಮಾಡಿದ್ದು, ಸರ್ಕಾರಿ ಗುತ್ತಿಗೆಗಳಲ್ಲಿ ಶೇ.4% ಮುಸ್ಲಿಂ ಮೀಸಲಾತಿಗೆ ಜೆಡಿಎಸ್ ವಿರೋಧ ಮಾಡುತ್ತಿಲ್ಲ ಎನ್ನುವ ಸುಳ್ಳು ಸುದ್ದಿಯನ್ನು ಹರಡಲಾಗುತ್ತಿದೆ. ಆದರೆ ಇದು ಸತ್ಯಕ್ಕೆ ದೂರವಾದದ್ದು ಎಂದು ಹೇಳಿದ್ದಾರೆ.
ನಮ್ಮ ಶಾಸಕರು, ಬಿಜೆಪಿ ಶಾಸಕರುಗಳೊಂದಿಗೆ ವಿಧಾನಸಭೆಯೊಳಗೆ ಒಟ್ಟಾಗಿ ಪ್ರತಿಭಟನೆ ನಡೆಸಿದರು ಮತ್ತು ಗೌರವಾನ್ವಿತ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ನಿಯೋಗದ ಭಾಗವಾಗಿದ್ದರು. ಸಂವಿಧಾನವು "ಧರ್ಮ ಆಧಾರಿತ" ಮೀಸಲಾತಿಗೆ ಅನುಮತಿಸುವುದಿಲ್ಲ. ನ್ಯಾಯಾಲಯಗಳು ಸಹ ಇದನ್ನು ಪುನರುಚ್ಚರಿಸಿವೆ.
ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಕಾಂಗ್ರೆಸ್‌ನ ಶೇ.4% ಮೀಸಲಾತಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯ ಮತ್ತು ತತ್ವಗಳನ್ನು ಉಲ್ಲಂಘಿಸುತ್ತದೆ ಮತ್ತು ಜೈನರು ಹಾಗೂ ಕ್ರಿಶ್ಚಿಯನ್ನರಂತಹ ಇತರ ಅಲ್ಪಸಂಖ್ಯಾತರನ್ನು ಬಿಟ್ಟು ಸಂಪೂರ್ಣವಾಗಿ ಮತಬ್ಯಾಂಕ್ ರಾಜಕೀಯಕ್ಕಾಗಿ ಎಂಬುದು ಸ್ಪಷ್ಟ.
ಜೆಡಿಎಸ್ ಪಕ್ಷವು, ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ರಾಜಕೀಯವನ್ನು ಬಲವಾಗಿ ಖಂಡಿಸುತ್ತದೆ. ನ್ಯಾಯಯುತ ನೀತಿಗಳ ಬದಲಿಗೆ, ಅವರು ಮತಗಳಿಗಾಗಿ ಒಂದು ಸಮುದಾಯವನ್ನು ಸಮಾಧಾನಪಡಿಸುತ್ತಾ, ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಇದು ಭಾರತದ ಸಂವಿಧಾನಕ್ಕೆ ಸಂಪೂರ್ಣ ವಿರುದ್ಧವಾಗಿದೆ. ನಾವು ಎಲ್ಲರಿಗೂ ಸಮಾನ ಅವಕಾಶಗಳನ್ನು ಬಯಸುತ್ತೇವೆಂದು ತಿಳಿಸಿದ್ದಾರೆ.
Advertisement